
ಬೆಂಗಳೂರು: ನಗರದ ಪ್ರಮುಖ ಹಸಿರು ಪ್ರದೇಶವಾಗಿರುವ ಕಬ್ಬನ್ ಪಾರ್ಕ್‌ನಲ್ಲಿ, ಖಾಸಗಿ ಸಂಸ್ಥೆಯೊಂದರಿಂದ “ಆರ್ಟ್ ಪಾರ್ಕ್” ನಿರ್ಮಾಣ ಮಾಡುವ ಸರ್ಕಾರದ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ. ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಈ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಸೋಸಿಯೇಷನ್ ಅಧ್ಯಕ್ಷ ಎಸ್. ಉಮೇಶ್ ಅವರು, “ಕಬ್ಬನ್ ಪಾರ್ಕ್ ಬೆಂಗಳೂರಿನ ಮುಖ್ಯ ಶ್ವಾಸಕೋಶವಾಗಿದೆ. ಇದು ವಾಣಿಜ್ಯ ಕೇಂದ್ರವಲ್ಲ, ಬದಲಾಗಿ ಸಂಸ್ಕೃತಿಯ ಸಂಕೇತವಾಗಿದೆ. ಇಲ್ಲಿ ಖಾಸಗಿ ಸಂಸ್ಥೆಯ ಆರ್ಟ್ ಪಾರ್ಕ್ ನಿರ್ಮಾಣದಿಂದ ಪರಿಸರ ಮತ್ತು ಶಾಂತಿ ಭಂಗವಾಗುತ್ತದೆ” ಎಂದು ಹೇಳಿದ್ದಾರೆ.
ಅವರು, ಸರ್ಕಾರವು ಈ ಯೋಜನೆಯನ್ನು ಮುಂದುವರೆಸಿದರೆ, ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ. ಕಬ್ಬನ್ ಪಾರ್ಕ್‌ನಲ್ಲಿ ಕಳೆದ ಎರಡು ವರ್ಷಗಳಲ್ಲಿ ಅನೇಕ ನಿರ್ಮಾಣ ಕಾರ್ಯಗಳು ನಡೆದಿದ್ದು, ಇದು ಪಾರ್ಕ್‌ನ ಮೂಲ ಸ್ವರೂಪಕ್ಕೆ ಹಾನಿ ಮಾಡುತ್ತಿದೆ ಎಂದು ವಾಕರ್ಸ್ ಅಸೋಸಿಯೇಷನ್ ಆರೋಪಿಸಿದೆ.
ಈ ವಿವಾದವು, ನಗರದಲ್ಲಿ ಹಸಿರು ಪ್ರದೇಶಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ನಡುವಿನ ಸಮತೋಲನದ ಕುರಿತು ಮಹತ್ವದ ಚರ್ಚೆಗೆ ಕಾರಣವಾಗಿದೆ.












