ನವದೆಹಲಿ: ಕರ್ನಾಟಕದ ವೈಮಾನಿಕ ವಲಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಗುರುವಾರ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರನ್ನು ಭೇಟಿಯಾಗಿ, ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ವಿಸ್ತೃತ ಚರ್ಚೆ ನಡೆಸಿದ್ದಾರೆ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳ ಆಯ್ಕೆ, ವಿಜಯಪುರ ವಿಮಾನ ನಿಲ್ದಾಣದ ಲೋಕಾರ್ಪಣೆ, ಹಾಗೂ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸುವ ಕುರಿತು ಮನವಿ ಸಲ್ಲಿಸಿದ್ದಾರೆ.
ಸಚಿವ ಎಂ.ಬಿ. ಪಾಟೀಲ ಅವರು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ ಮತ್ತು ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್ ಅವರೊಂದಿಗೆ ಈ ಭೇಟಿಯಲ್ಲಿ ಭಾಗವಹಿಸಿದ್ದರು.

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳ ಆಯ್ಕೆ
ಸಚಿವ ಎಂ.ಬಿ. ಪಾಟೀಲ ಅವರು, “ಬೆಂಗಳೂರಿನ ಸಮೀಪ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರಕಾರ ತೀರ್ಮಾನಿಸಿದೆ. ಈ ಯೋಜನೆಗಾಗಿ ಆಯ್ಕೆಯಾದ ಮೂರು ಸ್ಥಳಗಳನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ತಂಡವು ಪರಿಶೀಲಿಸಿದೆ. ಶೀಘ್ರವೇ ಸ್ಥಳವನ್ನು ಆಖೈರುಗೊಳಿಸಿದರೆ, ಮುಂದಿನ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ,” ಎಂದು ತಿಳಿಸಿದ್ದಾರೆ.
ವಿಜಯಪುರ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಕೋರಿಕೆ
ವಿಜಯಪುರದಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ವಿಮಾನ ನಿಲ್ದಾಣಕ್ಕೆ ಕೇಂದ್ರ ಪರಿಸರ ಇಲಾಖೆಯ ಅನುಮತಿ ಬಾಕಿಯಿದೆ ಎಂದು ಪಾಟೀಲರು ಚರ್ಚೆಯಲ್ಲಿ ಎತ್ತಿದ್ದಾರೆ. ಈ ವಿಷಯದಲ್ಲಿ ಶೀಘ್ರ ಕ್ರಮಕ್ಕೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.
ಹುಬ್ಬಳ್ಳಿ, ಬೆಳಗಾವಿಯನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸಲು ಒತ್ತಾಯ
ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ, ಮತ್ತು ಗೋವಾದ ಆರ್ಥಿಕ ಹಾಗೂ ಪ್ರಾದೇಶಿಕ ಅಭಿವೃದ್ಧಿಗೆ ವಿಮಾನ ಸಂಪರ್ಕ ಸುಧಾರಣೆ ಅಗತ್ಯವಿದೆ ಎಂದು ಒತ್ತಿ ಹೇಳಿರುವ ಪಾಟೀಲರು, ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸುವಂತೆ ಕೋರಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣ: 957 ಎಕರೆ ವಿಸ್ತೀರ್ಣದ ಈ ವಿಮಾನ ನಿಲ್ದಾಣವು 1980ರಿಂದ ಸಕ್ರಿಯವಾಗಿದೆ. 16,900 ಚ.ಮೀ. ವಿಸ್ತೀರ್ಣದ ಹೊಸ ಟರ್ಮಿನಲ್ ನಿರ್ಮಾಣವಾಗುತ್ತಿದ್ದು, ಎಬಿ320 ದರ್ಜೆಯ ವಿಮಾನಗಳ ನಿರ್ವಹಣೆ ಸಾಧ್ಯವಾಗಲಿದೆ. ವಾರ್ಷಿಕ 15 ಟನ್ ಸರಕು ಸಾಗಣೆ ಮತ್ತು 3 ಲಕ್ಷ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯವಿದೆ. ಇತ್ತೀಚೆಗೆ ಐಐಟಿ, ಐಐಐಟಿ, ಮತ್ತು ಕಿಮ್ಸ್ ಆಸ್ಪತ್ರೆಯಂತಹ ಸಂಸ್ಥೆಗಳ ಸ್ಥಾಪನೆಯಿಂದ ಹುಬ್ಬಳ್ಳಿ-ಧಾರವಾಡ ವಾಣಿಜ್ಯ ಕೇಂದ್ರವಾಗಿ ಮತ್ತಷ್ಟು ಬೆಳೆಯುತ್ತಿದೆ.
ಬೆಳಗಾವಿ ವಿಮಾನ ನಿಲ್ದಾಣ: 755 ಎಕರೆಯ ಈ ವಿಮಾನ ನಿಲ್ದಾಣವು 1990ರಿಂದ ಕಾರ್ಯನಿರ್ವಹಿಸುತ್ತಿದೆ. ಗಂಟೆಗೆ 2,400 ಪ್ರಯಾಣಿಕರನ್ನು ನಿರ್ವಹಿಸಬಲ್ಲ ಹೊಸ ಟರ್ಮಿನಲ್, ಎ321 ದರ್ಜೆಯ ವಿಮಾನಗಳಿಗೆ 12 ಪಾರ್ಕಿಂಗ್ ಬೇ, ಮತ್ತು ರಾತ್ರಿ ಲ್ಯಾಂಡಿಂಗ್ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಫೌಂಡ್ರಿ, ಏರೋಸ್ಪೇಸ್, ಅಲ್ಯೂಮಿನಿಯಂ ಉತ್ಪನ್ನಗಳು, ಹಣ್ಣು-ತರಕಾರಿ ಸಾಗಣೆಗೆ ಪ್ರತ್ಯೇಕ ಟರ್ಮಿನಲ್ ಇದೆ. ಮಲೇಷ್ಯಾದಿಂದ ವಿದ್ಯಾರ್ಥಿಗಳ ಆಗಮನ, ರಕ್ಷಣಾ ವಲಯದ ತರಬೇತಿ ಕೇಂದ್ರಗಳು, ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ಬೆಳಗಾವಿಯ ಮಹತ್ವ ಹೆಚ್ಚಿದೆ.

ರಾಜ್ಯದ ಇತರ ವಿಮಾನ ನಿಲ್ದಾಣಗಳ ಅಭಿವೃದ್ಧಿ
ಮೈಸೂರು, ಶಿವಮೊಗ್ಗ, ಹಾಸನ, ಕಾರವಾರ, ಮತ್ತು ರಾಯಚೂರು ವಿಮಾನ ನಿಲ್ದಾಣಗಳ ಅಭಿವೃದ್ಧಿ ಮತ್ತು ಭವಿಷ್ಯದ ಯೋಜನೆಗಳ ಕುರಿತೂ ಸಚಿವರು ಚರ್ಚಿಸಿದ್ದಾರೆ. ಈ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿ, ರಾಜ್ಯದ ವಿಮಾನಯಾನ ಸಂಪರ್ಕವನ್ನು ಬಲಪಡಿಸುವ ಗುರಿಯನ್ನು ಒತ್ತಿ ಹೇಳಿದ್ದಾರೆ.
ರಾಜ್ಯವನ್ನು ಪಾಲುದಾರನಾಗಿ ಪರಿಗಣಿಸಿ
ಕರ್ನಾಟಕವನ್ನು ನಾಗರಿಕ ವಿಮಾನಯಾನ ವಲಯದಲ್ಲಿ ಪಾಲುದಾರನಾಗಿ (ಸ್ಟೇಕ್‌ಹೋಲ್ಡರ್) ಪರಿಗಣಿಸಬೇಕೆಂದು ಸಚಿವ ಎಂ.ಬಿ. ಪಾಟೀಲ ಒತ್ತಾಯಿಸಿದ್ದಾರೆ. “ಮಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರಗಿ, ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳಿಂದ ರಾಜ್ಯಕ್ಕೆ ಲಾಭದ ಪಾಲು ಸಿಗಬೇಕು. ರಾಜ್ಯದ ಪಾತ್ರವನ್ನು ಕೇವಲ ಭೂಸ್ವಾಧೀನ ಮತ್ತು ಸೌಕರ್ಯ ಅಭಿವೃದ್ಧಿಗೆ ಸೀಮಿತಗೊಳಿಸಬಾರದು. ಆಸ್ತಿ ನಗದೀಕರಣ ಯೋಜನೆಯಲ್ಲೂ ರಾಜ್ಯವನ್ನು ಪಾಲುದಾರನಾಗಿ ಗುರುತಿಸಬೇಕು,” ಎಂದು ಒತ್ತಾಯಿಸಿದ್ದಾರೆ. 2021ರಲ್ಲಿ ಖಾಸಗೀಕರಣಕ್ಕೆ ಗುರುತಿಸಲಾದ 13 ವಿಮಾನ ನಿಲ್ದಾಣಗಳಲ್ಲಿ ಹುಬ್ಬಳ್ಳಿಯೂ ಒಂದಾಗಿದ್ದು, ಈ ಯೋಜನೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.












