ಬೆಂಗಳೂರು: ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ (ಎಎನ್‌ಎಸ್‌ಎಸ್‌ಐಆರ್‌ಡಿ)ಯಲ್ಲಿ ಕಳೆದ ಎರಡು ದಶಕಗಳಿಂದ 204 ತಾಲೂಕುಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ 300 ವಿಕೇಂದ್ರೀಕೃತ ತರಬೇತಿ ಸಂಯೋಜಕರಿಗೆ (ಡಿಟಿಸಿ) ಕಳೆದ ಒಂದು ವರ್ಷದಿಂದ ಗೌರವಧನ ನೀಡದೆ ರಾಜ್ಯ ಸರ್ಕಾರ ನೌಕರರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಗ್ಯಾರಂಟಿ ಸರ್ಕಾರ, ಬಡವರ ಪರ ಸರ್ಕಾರ ಎಂದು ವೇದಿಕೆಗಳಲ್ಲಿ ಭಾಷಣ ಮಾಡುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಅಶೋಕ್ ಹೇಳಿದ್ದು, “ಹಗಲಿರುಳು ಶ್ರಮಿಸಿ ಗ್ರಾಮೀಣ ಮಟ್ಟದಲ್ಲಿ ತರಬೇತಿ ನೀಡುವ ಈ ಕಾಯಕಯೋಗಿಗಳ ಹೊಟ್ಟೆಯ ಮೇಲೆ ಹೊಡೆಯಲು ನಿಮಗೆ ನಾಚಿಕೆಯಾಗುವುದಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
12 ತಿಂಗಳುಗಳಿಂದ ಗೌರವಧನ ತಡೆಹಿಡಿಯಲಾಗಿದ್ದು, ಈ ಕುಟುಂಬಗಳು ಜೀವನ ನಿರ್ವಹಣೆಗೆ ಪರದಾಡುತ್ತಿವೆ ಎಂದು ಅವರು ತಿಳಿಸಿದ್ದಾರೆ. 30 ವರ್ಷಗಳಿಂದ ಇದೇ ವೃತ್ತಿಯನ್ನು ನಂಬಿಕೊಂಡು ಕೆಲಸ ಮಾಡುತ್ತಿರುವ ತರಬೇತುದಾರರು ಈಗ ವಯೋಮಿತಿ ಮೀರಿರುವುದರಿಂದ ಬೇರೆ ಉದ್ಯೋಗಕ್ಕೂ ಹೋಗಲಾಗದೆ ಬೀದಿಗೆ ಬಿದ್ದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಉದ್ಯೋಗ ಖಾತ್ರಿ ಮತ್ತು ಸೌಕರ್ಯ ಒದಗಿಸುವುದಾಗಿ ನೀಡಿದ್ದ ಭರವಸೆಗಳನ್ನು ಮರೆತು ಈ ಶ್ರಮಿಕರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಅಶೋಕ್ ಹೇಳಿದ್ದಾರೆ. ಖಾಲಿ ಖಜಾನೆಯನ್ನು ಮುಚ್ಚಿಟ್ಟು ಪ್ರಚಾರದಲ್ಲಿ ಮುಳುಗಿರುವ ಸರ್ಕಾರಕ್ಕೆ ಬಡ ಜನರ ಮತ್ತು ನೌಕರರ ಕಷ್ಟ ಅರ್ಥವಾಗುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಾ, “ತಕ್ಷಣವೇ ಈ 300 ಡಿಟಿಸಿ ಸಿಬ್ಬಂದಿಗಳ ಬಾಕಿ ಗೌರವಧನವನ್ನು ಬಿಡುಗಡೆ ಮಾಡಿ ಮತ್ತು ಅವರ ಉದ್ಯೋಗ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ಈ ಶ್ರಮಿಕರ ಶಾಪ ನಿಮ್ಮ ಸರ್ಕಾರವನ್ನು ಸುಡದೆ ಬಿಡಲಾರದು” ಎಂದು ಅಶೋಕ್ ಎಚ್ಚರಿಸಿದ್ದಾರೆ.











