ತಣಿಸಂದ್ರ ಸರ್ಕಾರಿ ಪ್ರೌಢಶಾಲೆ ದೆಹಲಿ ಶಾಲೆಗಳಿಗಿಂತಲೂ ಉತ್ತಮ: ಸಚಿವರ ಹೊಗಳಿಕೆ
ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಕರ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ, ಶಿಕ್ಷಕರೊಂದಿಗೆ ದಿನಾಚರಣೆ ಆಚರಿಸಿದರು. ಶಿಕ್ಷಣ ಸಚಿವರೊಬ್ಬರು ಸರ್ಕಾರಿ ಶಾಲೆಯಲ್ಲಿ ನೇರವಾಗಿ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಆಚರಿಸಿದ್ದು ಇದೇ ಮೊದಲು.
ಮೊದಲಿಗೆ ತಣಿಸಂದ್ರದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಸಚಿವರು ಶಿಕ್ಷಕರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶಾಲೆಯ ಮುಖ್ಯಶಿಕ್ಷಕಿ ವೀಣಾ ಅವರು, “ಸಚಿವರು ನಮ್ಮ ಶಾಲೆಗೆ ಬಂದು ಶಿಕ್ಷಕರ ದಿನಾಚರಣೆ ಆಚರಿಸಿದ್ದು ನಮಗೆ ಸಿಕ್ಕ ಸುವರ್ಣಾವಕಾಶ. ಇದು ಶಿಕ್ಷಕರಿಗೆ ಸಿಕ್ಕ ದೊಡ್ಡ ಗೌರವ” ಎಂದು ಸಂತಸ ವ್ಯಕ್ತಪಡಿಸಿದರು.
9ನೇ ತರಗತಿ ವಿದ್ಯಾರ್ಥಿನಿ ಸಾಭಮ್ಮ ಮಾತನಾಡಿ, “ಖಾಸಗಿ ಶಾಲೆಗಳಿಗಿಂತ ನಮ್ಮ ಸರ್ಕಾರಿ ಶಾಲೆ ಯಾವುದಕ್ಕೂ ಕಡಿಮೆಯಿಲ್ಲ. ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಸರ್ಕಾರ ಒದಗಿಸಿದೆ” ಎಂದು ಹೆಮ್ಮೆಯಿಂದ ಹೇಳಿದರು.

“ತಂದೆ-ತಾಯಿ ಜನ್ಮ ನೀಡಿದರೆ, ದಾರಿ ತೋರಿಸುವವರು ಶಿಕ್ಷಕರು”
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, “ಮಕ್ಕಳು ಚೆನ್ನಾಗಿ ಮಾತನಾಡಿದರು. ಇಲ್ಲಿಯ ಶಿಕ್ಷಕರು ಹೇಗೆ ಕಲಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ತಂದೆ-ತಾಯಿ ಜನ್ಮ ನೀಡಿದರೆ, ಬದುಕಿನ ದಾರಿ ತೋರಿಸುವವರು ಶಿಕ್ಷಕರು. ಸಾವಿರಾರು ಮಕ್ಕಳಿಗೆ ದಾರಿ ತೋರಿಸುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ” ಎಂದು ಶಿಕ್ಷಕರಿಗೆ ಹೇಳಿದರು.
“ಸರ್ಕಾರಿ ಶಾಲೆಗಳ ಬಗ್ಗೆ ಮಾಧ್ಯಮದಲ್ಲಿ ಟೀಕೆ-ಟಿಪ್ಪಣಿ ಬರುತ್ತಲೇ ಇರುತ್ತವೆ. ಆದರೆ ಈ ಶಾಲೆಯಂತಹ ಸರ್ಕಾರಿ ಶಾಲೆಗಳ ಸಾಧನೆ ಮತ್ತು ಸೌಕರ್ಯಗಳನ್ನು ರಾಜ್ಯ ಜನರಿಗೆ ತೋರಿಸುವುದಿಲ್ಲ. ಈ ಶಾಲೆ ದೆಹಲಿಯ ಸರ್ಕಾರಿ ಶಾಲೆಗಳಿಗಿಂತಲೂ ಉತ್ತಮವಾಗಿದೆ” ಎಂದು ಸಚಿವರು ಹೇಳಿದರು.
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರು ಮಕ್ಕಳನ್ನು ಶಾಲೆಯಲ್ಲಿ ಉಳಿಸಲು ದಿನಕ್ಕೆ ಒಂದು ರೂಪಾಯಿ ನೀಡುತ್ತಿದ್ದ ‘ಅಕ್ಷಯ’ ಯೋಜನೆಯನ್ನು ಶಿಕ್ಷಕರು ಸ್ಮರಿಸಿದರು. ಸಚಿವರು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಬಿಸಿಯೂಟ ಯೋಜನೆಯನ್ನೂ ನೆನಪಿಸಿಕೊಂಡರು.

ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಮಾದರಿ ಶಾಲೆಗಳನ್ನಾಗಿ ರೂಪಿಸಲಾಗುವುದು
ರಾಜ್ಯದಲ್ಲಿ ಸುಮಾರು 46 ಸಾವಿರ ಶಾಲೆಗಳಿವೆ. ಸರ್ಕಾರಿ ಶಾಲೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ರಾಜ್ಯದ ಮಾದರಿ ಶಾಲೆಗಳನ್ನಾಗಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
13 ಸಾವಿರ ಶಿಕ್ಷಕರ ನೇಮಕ; 15 ಸಾವಿರಕ್ಕೂ ಹೆಚ್ಚು ಹುದ್ದೆಗಳ ಪ್ರಕ್ರಿಯೆ
“ಅಧಿಕಾರಕ್ಕೆ ಬಂದ ಕೂಡಲೇ ಹಿಂದಿನ ಸರ್ಕಾರದ ಯಡವಟ್ಟಿನಿಂದ ಕೋರ್ಟ್‌ನಲ್ಲಿ ತಡೆಹಿಡಿದಿದ್ದ 13 ಸಾವಿರ ಶಿಕ್ಷಕರನ್ನು ನೇಮಕ ಮಾಡಿದ್ದೇವೆ. 52 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. 15 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿಯೂ ಪ್ರಗತಿಯಲ್ಲಿದೆ” ಎಂದು ಸಚಿವರು ಹೇಳಿದರು.
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 1ರಿಂದ 12ನೇ ತರಗತಿ ವರೆಗೆ ಉಚಿತ ನೋಟ್ಸ್ ಪುಸ್ತಕಗಳನ್ನು ನೀಡಲಾಗುವುದು. ಸಾಧ್ಯವಾದರೆ ಇದೇ ವರ್ಷದಿಂದ ಜಾರಿಗೆ ತರಲಾಗುವುದು. ಈ ಬಾರಿ ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕಗಳನ್ನು ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
“ಬೆಸ್ಟ್ ಗುರುಗಳು ಸಿಗುವುದು ಸರ್ಕಾರಿ ಶಾಲೆಗಳಲ್ಲಿ ಮಾತ್ರ. ಸರ್ಕಾರಿ ಶಾಲೆಗಳ ಶಿಕ್ಷಕರು ನೀಡುತ್ತಿರುವ ಸೇವೆ ಅತ್ಯಂತ ಮಹತ್ವದ್ದು” ಎಂದು ಅವರು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಚಿವರು ಎಲ್ಲ ಶಿಕ್ಷಕರಿಗೂ ಗುಲಾಬಿ ಹೂ ನೀಡಿ ಶುಭಾಶಯಗಳನ್ನು ಕೋರಿದರು. ಬಳಿಕ ಆರ್.ಕೆ. ಹೆಗ್ಗಡೆನಗರದ ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಶಾಲೆ, ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರಿಗೆ ಶುಭಾಶಯ ತಿಳಿಸಿದರು.











