ಬೆಂಗಳೂರು: ರಿಯಲ್ ಎಸ್ಟೇಟ್ ಆಡಳಿತದಿಂದ ಹೊರಬಂದು ‘ಪ್ರಜಾಸೇವೆ’ ನೆನಪಿಸಿಕೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಧನ್ಯವಾದ ಹೇಳುತ್ತಲೇ, ಕಳೆದ ಮೂರು ವರ್ಷಗಳಿಂದ ಜನಸಾಮಾನ್ಯರನ್ನು ನಿರ್ಲಕ್ಷಿಸಿ ಈಗ ನಡೆಯುತ್ತಿರುವ ಕಾರ್ಯಕ್ರಮಗಳು ‘ಬ್ರ್ಯಾಂಡ್ ಬೆಂಗಳೂರು’ ಮಾದರಿಯ ಪ್ರಚಾರ ಗಿಮಿಕ್ ಮಾತ್ರ ಎಂದು ರಾಜ್ಯದ ಜನರಿಗೆ ಚೆನ್ನಾಗಿ ತಿಳಿದಿದೆ ಎಂದು ನಿಖಿಲ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕ್ಯಾಮೆರಾಗಳಿಗೆ ಪೋಸ್ ಕೊಡುವ ಮೊದಲು ನಾಡಿನ ಜ್ವಲಂತ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಅವರು ಸರ್ಕಾರದ ಕಡೆಗೆ ಪ್ರಶ್ನಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 1.2 ಕೋಟಿ ಫಲಾನುಭವಿ ಮಹಿಳೆಯರಿಗೆ ತಲುಪಬೇಕಾದ ₹5,000 ಕೋಟಿ ಹಣ ಎಲ್ಲಿದೆ? ಮಾನ್ಯ ಹೈಕೋರ್ಟ್‌ನ ಗಮನ ಸೆಳೆದಿದ್ದರೂ ಈ ಹಣ ಇನ್ನೂ ಬಾಕಿ ಇದೆ ಎಂದು ಅವರು ಪ್ರಶ್ನಿಸಿದ್ದಾರೆ.
ಶಕ್ತಿ ಯೋಜನೆಯಡಿ ಸಾರಿಗೆ ನಿಗಮಗಳಿಗೆ ನೀಡಬೇಕಾದ ₹5,650 ಕೋಟಿ ಬಾಕಿ ಮೊತ್ತವನ್ನು ಬಿಡುಗಡೆ ಮಾಡದೆ ಸಾರಿಗೆ ಸಂಸ್ಥೆಗಳನ್ನು ಕತ್ತಲಿಗೆ ತಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ವಿಧವೆಯರು, ವೃದ್ಧರು ಹಾಗೂ ದಿವ್ಯಾಂಗರ 8 ತಿಂಗಳ ಸಾಮಾಜಿಕ ಭದ್ರತಾ ಪಿಂಚಣಿಯನ್ನು ತಡೆಹಿಡಿದಿರುವುದೇ ಸರ್ಕಾರದ ‘ಸಾಮಾಜಿಕ ನ್ಯಾಯ’ವೇ ಎಂದು ಪ್ರಶ್ನಿಸಿದ್ದಾರೆ.
ಬರಪೀಡಿತ ರೈತರಿಗೆ ಸೂಕ್ತ ಪರಿಹಾರ ತಲುಪಿಲ್ಲ. ಬೀದರ್ ಭೂಸ್ವಾಧೀನ ವಿರೋಧಿಸಿ ರೈತರು 600ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ ಎಂದು ಅವರು ನೆನಪಿಸಿದ್ದಾರೆ. ಬೆಂಗಳೂರಿನ ಮಾರಣಾಂತಿಕ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ. ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನವನ್ನೂ ಸಂಪೂರ್ಣವಾಗಿ ತಡೆಹಿಡಿಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರಚಾರಕ್ಕಷ್ಟೇ ಸೀಮಿತವಾದ ಆಡಳಿತವನ್ನು ಬಿಟ್ಟು ಜನಪರ ಆಡಳಿತ ನೀಡಬೇಕು ಎಂದು ನಿಖಿಲ್ ಕುಮಾರ್ ಒತ್ತಾಯಿಸಿದ್ದಾರೆ. ‘ಸೂಪರ್ ಸಿಎಂ’ ಆರ್.ಎಸ್. ಸುರ್ಜೆವಾಲಾ ಅವರೇ ಸರ್ಕಾರಕ್ಕೆ ತಕ್ಷಣ ಸೂಕ್ತ ನಿರ್ದೇಶನ ನೀಡಿ, ರಾಜ್ಯದ ಜನರ ಕಷ್ಟಗಳಿಗೆ ಸ್ಪಂದಿಸುವಂತೆ ಮಾಡಬೇಕು ಎಂದು ಅವರು ಕರೆ ನೀಡಿದ್ದಾರೆ.











