ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ಒಣಗಿ ಬಿರುಕು ಬಿಟ್ಟಿರುವ ಹೊಲಗಳನ್ನು ಹೆಲಿಕಾಪ್ಟರ್‌ನಿಂದ ಸಮೀಕ್ಷೆ ಮಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಬಿಜೆಪಿ ನಾಯಕ ಆರ್. ಆಶೋಕ್ ತೀವ್ರ ಟೀಕೆ ಮಾಡಿದ್ದಾರೆ.
“ಆಕಾಶದಿಂದ ಒಣಗಿದ ಭೂಮಿ ನೋಡಿದರೆ ರೈತರ ಕಣ್ಣೀರು ಕಾಣಿಸುತ್ತದೆಯೇ ಮುಖ್ಯಮಂತ್ರಿ?” ಎಂದು ಪ್ರಶ್ನಿಸಿದ ಆಶೋಕ್, “ಪ್ರವಾಹ ಬಂದಾಗ ನೀರು ತುಂಬಿದ ರಸ್ತೆಗಳು, ಮುಳುಗಿದ ಸೇತುವೆಗಳನ್ನು ವೈಮಾನಿಕ ಸಮೀಕ್ಷೆ ಮಾಡುವುದು ಸಹಜ. ಆದರೆ ಮಳೆಯಿಲ್ಲದೆ ಒಣಗಿ ಬಿರುಕು ಬಿಟ್ಟ ಹೊಲಗಳನ್ನು ಹೆಲಿಕಾಪ್ಟರ್‌ನಲ್ಲೇ ಹಾರಾಡಿ ಸಮೀಕ್ಷೆ ನಡೆಸಿದ ವಿಶ್ವದ ಏಕೈಕ ಮುಖ್ಯಮಂತ್ರಿ ಎಂಬ ಕುಖ್ಯಾತಿ ನಿಮಗೇ ಸಲ್ಲಬೇಕು” ಎಂದು ಹೇಳಿದ್ದಾರೆ.
ರೈತರ ಒಣಗಿದ ಜಮೀನಿಗೆ ಕಾಲಿಡಲು ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದ ಅವರು, “ಒಣಗಿರುವ ಜಮೀನಿನಲ್ಲಿ ನಿಂತು ರೈತನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಭಯವೇ? ನೆರವಿಗೆ ಕಾಯುತ್ತಿರುವ ರೈತರ ಆಕ್ರೋಶದ ಪ್ರಶ್ನೆಗಳಿಗೆ ಉತ್ತರಿಸಲು ನಡುಕವೇ? ನೆಲಕ್ಕಿಳಿದರೆ ಸರ್ಕಾರದ ವೈಫಲ್ಯ ಬಟಾಬಯಲಾಗುತ್ತದೆ ಎಂಬ ಅಂಜಿಕೆಯೇ?” ಎಂದು ಮುಖ್ಯಮಂತ್ರಿಯನ್ನು ಟೀಕಿಸಿದ್ದಾರೆ.
“ಬಿಸಿಲಿನಲ್ಲಿ ಒಣಗಿದ ಪೈರಿನ ನೋವು, ಸಾಲದ ಸುಳಿಯಲ್ಲಿ ಸಿಲುಕಿದ ರೈತನ ಕಣ್ಣೀರು ಹೆಲಿಕಾಪ್ಟರ್‌ನ ಎಸಿ ಗಾಳಿಯಲ್ಲಿ ಕುಳಿತು ಗಾಜಿನ ಕಿಟಕಿಯಿಂದ ಇಣುಕಿ ನೋಡಿದರೆ ಅರ್ಥವಾಗುತ್ತದೆಯೇ?” ಎಂದು ಪ್ರಶ್ನಿಸಿದ ಆಶೋಕ್, “ಹೆಲಿಕಾಪ್ಟರ್ ಹಾರಿತು, ಕ್ಯಾಮೆರಾಗಳು ಕ್ಲಿಕ್ಕಿಸಿದವು, ಪ್ರಚಾರದ ಫೋಟೋ ಶೂಟ್ ಮುಗಿಯಿತು. ಆದರೆ ಬಳ್ಳಾರಿ, ವಿಜಯನಗರ, ಬಾಗಲಕೋಟೆಯ ಬಿಸಿಲಿನಲ್ಲಿ ಬೇಯುತ್ತಿರುವ ರೈತನ ಬದುಕಿಗೆ ಸಿಕ್ಕ ಪರಿಹಾರವೇನು?” ಎಂದು ಕೇಳಿದ್ದಾರೆ.
ಹೆಲಿಕಾಪ್ಟರ್ ಬಾಡಿಗೆ ಮತ್ತು ಇಂಧನ ವೆಚ್ಚದಲ್ಲೇ ನೂರಾರು ಸಂತ್ರಸ್ತ ರೈತ ಕುಟುಂಬಗಳಿಗೆ ಪರಿಹಾರ ನೀಡಬಹುದಿತ್ತು ಎಂದು ಅವರು ಹೇಳಿದ್ದಾರೆ. “ರೈತನಿಗೆ ಬೇಕಿರುವುದು ಆಕಾಶದ ಪ್ರವಾಸವಲ್ಲ. ನೆಲಕ್ಕಿಳಿದು ಧೈರ್ಯ ತುಂಬುವ ನಾಯಕ. ಆಕಾಶದಿಂದ ಆಡಳಿತ ನಡೆಸಲು ಸಾಧ್ಯವಿಲ್ಲ. ಹೆಲಿಕಾಪ್ಟರ್‌ನಿಂದ ಕೆಳಗಿಳಿದು ರೈತನ ಹೊಲಕ್ಕೆ ಬನ್ನಿ. ಅನ್ನದಾತನ ಭುಜ ತಟ್ಟಿ ಆತ್ಮಸ್ಥೈರ್ಯ ತುಂಬಿ ಅವರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ” ಎಂದು ಸಿಎಂಗೆ ಸವಾಲು ಹಾಕಿದ್ದಾರೆ.











