ಬೆಂಗಳೂರು: ವಿದ್ಯಾರ್ಥಿಗಳನ್ನು ಹೆಚ್ಚು ಹೆಚ್ಚು ವ್ಯವಹಾರ ಯೋಜನಾ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರೆ ಅವರು ಉತ್ತಮ ಕೈಗಾರಿಕೋದ್ಯಮಿಗಳು ಮತ್ತು ವ್ಯಾಪಾರಸ್ಥರಾಗುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವರು ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಅಧ್ಯಕ್ಷರಾದ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್‌ಕೆಸಿಸಿಐ) ಹಾಗೂ ಉನ್ನತ ಶಿಕ್ಷಣ ಇಲಾಖೆ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ‘ಮಂಥನ-2026’ ವ್ಯವಹಾರ ಯೋಜನಾ ಸ್ಪರ್ಧೆಯ 18ನೇ ಆವೃತ್ತಿಯ ಗ್ರಾಂಡ್ ಫಿನಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 18 ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮವು ವಿದ್ಯಾರ್ಥಿಗಳು ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿ ಹಾಗೂ ತಮ್ಮಲ್ಲಿರುವ ನಾವೀನ್ಯತೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ ಎಂದು ಸಚಿವರು ಹೇಳಿದರು. ಹಲವಾರು ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಆಯೋಜಿಸಿದ ನಂತರ ಇಂದು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ವಿಧಾನಸೌಧದಲ್ಲಿ ಗ್ರಾಂಡ್ ಫಿನಾಲೆ ನಡೆಸುತ್ತಿರುವುದು ಐತಿಹಾಸಿಕ ಎಂದು ಅವರು ಹೇಳಿದರು.
ಖಾಸಗಿ ಮತ್ತು ಸರ್ಕಾರಿ ವಿದ್ಯಾಸಂಸ್ಥೆಗಳ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಲ್ಲಿ ಚರ್ಚೆ ನಡೆಸಿ 23 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಸುಮಾರು 25 ಲಕ್ಷ ರೂಪಾಯಿ ಪ್ರೋತ್ಸಾಹ ಧನ ಹಂಚಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಇಂತಹ ನಾವೀನ್ಯತೆಯುಳ್ಳ ವಿದ್ಯಾರ್ಥಿಗಳು ಉತ್ತಮ ಉದ್ಯಮಿಗಳಾದರೆ ದೇಶಕ್ಕೆ ದೊಡ್ಡ ಪ್ರಗತಿ ಆಗುತ್ತದೆ ಎಂದು ಅವರು ಅಭಿನಂದಿಸಿದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಯುವಕರನ್ನು ಕಾಡುತ್ತಿದೆ. ವಾಣಿಜ್ಯ-ಕೈಗಾರಿಕಾ ಸಂಸ್ಥೆಗಳು ಯುವಪೀಳಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ವಿದ್ಯಾರ್ಥಿಗಳು ವಿದೇಶಕ್ಕೆ ವಲಸೆ ಹೋಗುತ್ತಾರೆ. ನಮ್ಮ ದೇಶದಲ್ಲಿ ಕಲಿತು ಪ್ರತಿಭೆಯನ್ನು ಬೇರೆ ದೇಶಕ್ಕೆ ನೀಡುವುದರಿಂದ ಏನು ಪ್ರಯೋಜನ? ದೇಶದ ಬಗ್ಗೆ ಚಿಂತಿಸಿ ಇಲ್ಲಿಯೇ ಉದ್ಯಮ ಸ್ಥಾಪಿಸಿ ಹೆಚ್ಚಿನ ಉದ್ಯೋಗ ಸೃಷ್ಟಿಸಬೇಕು ಎಂದು ಸಚಿವರು ಕರೆ ನೀಡಿದರು.
ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ತುಳಸಿ ಮದ್ದಿನೇನಿ ಮಾತನಾಡಿ, ಒಟ್ಟು 1,200 ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 120 ಪ್ರಸ್ತಾವನೆಗಳು ಉತ್ತಮವಾಗಿವೆ ಮತ್ತು ಕೆಲವು ಅತ್ಯುತ್ತಮವಾಗಿವೆ ಎಂದು ತಿಳಿಸಿದರು. ಉನ್ನತ ಶಿಕ್ಷಣ ಇಲಾಖೆ ಪದವಿಯೊಂದಿಗೆ ಕೌಶಲ್ಯವನ್ನೂ ನೀಡುತ್ತಿದೆ. 20 ವರ್ಷಗಳ ಹಿಂದೆ ಪದವಿ ಪಡೆದು ವ್ಯಾಪಾರ ಮಾಡುತ್ತೇನೆ ಎಂದರೆ ಪೋಷಕರು ‘ಕೆಲಸ ಮಾಡು’ ಎನ್ನುತ್ತಿದ್ದರು. ಆದರೆ ಈಗ ‘ಸ್ಟಾರ್ಟ್‌ಅಪ್ ಮಾಡುತ್ತೇನೆ’ ಎಂದರೆ ಪ್ರೋತ್ಸಾಹಿಸುತ್ತಾರೆ. ವ್ಯಾಪಾರದಲ್ಲಿ ಎಷ್ಟು ಕಷ್ಟವಿದೆಯೋ ಕೆಲಸದಲ್ಲೂ ಅಷ್ಟೇ ಕಷ್ಟವಿದೆ. ಯಶಸ್ವಿ ಉದ್ಯಮಿಗಳಾಗಿ ಎಂದು ಅವರು ವಿದ್ಯಾರ್ಥಿಗಳಿಗೆ ಹಾರೈಸಿದರು.
ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾರೆಡ್ಡಿ, ಚುನಾಯಿತ ಅಧ್ಯಕ್ಷ ಟಿ. ಸಾಯಿರಾಮ್ ಪ್ರಸಾದ್, ಚುನಾಯಿತ ಹಿರಿಯ ಉಪಾಧ್ಯಕ್ಷ ಬಿ.ಪಿ. ಶಶಿಧರ್, ಮಂಥನ್ ಛೇರ್ಮನ್ ಸಿಎ ಶ್ರವಣ್ ಗುಡುತೂರ್, ಯುಕೆ ಅಂಡ್ ಕೋ ಸಂಸ್ಥೆಯ ಸಂಸ್ಥಾಪಕ ಡಾ. ಕೆ. ಉಲ್ಲಾಸ್ ಕಾಮತ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಡಾ. ಗೋಪಾಲ್ ಕೃಷ್ಣ ಎಚ್.ಎನ್., ಡಿ. ಮುರಳೀಧರ್ ಹಾಗೂ ಮಂಥನ್ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.











