ವಿಜಯನಗರ: ತುಂಗಭದ್ರ ಜಲಾಶಯದಲ್ಲಿ ತುಂಬಿರುವ ಭಾರಿ ಪ್ರಮಾಣದ ಹೂಳನ್ನು ವೈಜ್ಞಾನಿಕವಾಗಿ ತೆರವುಗೊಳಿಸಲು ಸಾಧ್ಯವಿದೆಯೇ ಎಂಬುದನ್ನು ಸರ್ಕಾರ ತಕ್ಷಣ ತಜ್ಞರಿಂದ ಪರಿಶೀಲಿಸಬೇಕು. ಹೂಳು ತೆರವು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದಾದರೆ, ಯಾವುದೇ ವಿಳಂಬ ಮಾಡದೆ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಯೋಜನೆಯನ್ನು ಕಾರ್ಯಗತಗೊಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.
ಪಾದಯಾತ್ರೆಯ ಸಂದರ್ಭದಲ್ಲಿ ನವುಲೆ ಸಮಾನಾಂತರ ಜಲಾಶಯ ಹೋರಾಟಗಾರರೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು. ತುಂಗಭದ್ರ ಜಲಾಶಯ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ರೈತರ ಜೀವನಾಡಿಯಾಗಿದೆ. ಜಲಾಶಯದ ಸಂಗ್ರಹ ಸಾಮರ್ಥ್ಯ ಹೂಳಿನಿಂದ ಕುಸಿಯುತ್ತಿರುವಾಗ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳದೆ ಕಾಲಹರಣ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಟೀಕಿಸಿದರು.
“ಹೂಳು ತೆಗೆಯಲು ಸಾಧ್ಯವಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಮತ್ತೊಂದೆಡೆ ಸಮಾನಾಂತರ ಜಲಾಶಯ ನಿರ್ಮಾಣವೇ ಶಾಶ್ವತ ಪರಿಹಾರ, ಹೂಳು ತೆಗೆಯುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯವೂ ಇದೆ. ಈ ಗೊಂದಲಕ್ಕೆ ಸರ್ಕಾರವೇ ತೆರೆ ಎಳೆಯಬೇಕು. ಹೂಳು ತೆರವು ಸಾಧ್ಯವೇ ಇಲ್ಲವೇ ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸಿ ಸ್ಪಷ್ಟ ವರದಿ ಪಡೆಯಬೇಕು. ರೈತರನ್ನು ಇನ್ನೂ ನಾಲ್ಕೈದು ವರ್ಷ ಕಾಯಿಸುವಂತಾಗಬಾರದು” ಎಂದು ವಿಜಯೇಂದ್ರ ಹೇಳಿದರು.
ಜಲಾಶಯದಲ್ಲಿ ನೀರು ಇಲ್ಲದ ಸಂದರ್ಭದಲ್ಲಿ ಮಾತ್ರ ದೊಡ್ಡ ಪ್ರಮಾಣದಲ್ಲಿ ಹೂಳು ತೆರವು ಕಾರ್ಯ ಕೈಗೊಳ್ಳಲು ಸಾಧ್ಯವಾಗುವುದಾದರೆ, ಮುಂದಿನ ಬರಗಾಲದವರೆಗೆ ಕಾಯುವುದು ರೈತರ ಹಿತಕ್ಕೆ ವಿರುದ್ಧ ಎಂದು ಅವರು ಅಭಿಪ್ರಾಯಪಟ್ಟರು. “34 ಟಿಎಂಸಿ ಹೂಳು ಇದೆ ಎಂದು ಹೇಳಲಾಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದ ಹೂಳನ್ನು ಯಾವ ತಂತ್ರಜ್ಞಾನದಿಂದ, ಎಷ್ಟು ಅವಧಿಯಲ್ಲಿ ಮತ್ತು ಎಷ್ಟು ವೆಚ್ಚದಲ್ಲಿ ತೆಗೆಯಬಹುದು ಎಂಬುದಕ್ಕೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು. ಹಿಂದೆ ಹೂಳು ತೆರವು ಪ್ರಯತ್ನ ನಡೆದಿದ್ದರೆ ಅದರ ಫಲಿತಾಂಶ ಮತ್ತು ತಾಂತ್ರಿಕ ವರದಿಯನ್ನೂ ಬಹಿರಂಗಪಡಿಸಬೇಕು” ಎಂದು ಅವರು ಆಗ್ರಹಿಸಿದರು.
ಹೂಳು ತೆರವು ಸಾಧ್ಯವಿಲ್ಲ ಅಥವಾ ಆರ್ಥಿಕವಾಗಿ ಕಾರ್ಯಸಾಧ್ಯವಲ್ಲ ಎಂಬುದು ತಜ್ಞರ ಅಭಿಪ್ರಾಯವಾದರೆ, ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರ ತಕ್ಷಣ ಮುಂದಾಗಬೇಕು ಎಂದು ವಿಜಯೇಂದ್ರ ತಿಳಿಸಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಡಿಪಿಆರ್ ಸಿದ್ಧಪಡಿಸಲು ₹14 ಕೋಟಿ ಮೀಸಲಿಟ್ಟಿದ್ದರೂ ಯೋಜನೆ ಮುಂದುವರಿಯಲಿಲ್ಲ ಎಂದು ಅವರು ನೆನಪಿಸಿದರು.

ಸಮಾನಾಂತರ ಜಲಾಶಯಕ್ಕೆ ಸುಮಾರು ₹22 ಸಾವಿರ ಕೋಟಿ ವೆಚ್ಚವಾಗಲಿದೆ ಎಂಬ ಅಂದಾಜು ಇದೆ. ಇಷ್ಟು ದೊಡ್ಡ ಮೊತ್ತದ ಯೋಜನೆಯಲ್ಲಿ ಆರಂಭಿಕ ಅಂದಾಜು, ಅಂತಿಮ ವೆಚ್ಚ, ಪೂರ್ಣಗೊಳ್ಳುವ ಅವಧಿ ಹಾಗೂ ರಾಜ್ಯದ ಮೇಲಿನ ಹಣಕಾಸಿನ ಹೊರೆ ಕುರಿತು ಸದನದಲ್ಲಿ ಸಮಗ್ರ ಚರ್ಚೆ ನಡೆಯಬೇಕು ಎಂದು ಅವರು ಹೇಳಿದರು. “ಇಂದು ₹15 ಸಾವಿರ ಅಥವಾ ₹22 ಸಾವಿರ ಕೋಟಿ ಎಂದು ಹೇಳಿ ಯೋಜನೆ ಆರಂಭಿಸಿ, ಪೂರ್ಣಗೊಳ್ಳುವ ವೇಳೆಗೆ ವೆಚ್ಚ ₹35 ಸಾವಿರ ಕೋಟಿಗೆ ಏರುವ ಪರಿಸ್ಥಿತಿ ಬರಬಾರದು. ಇದು ತೆರಿಗೆದಾರರ ಹಣ. ಆದ್ದರಿಂದ ನಾವು ವಿರೋಧ ಪಕ್ಷದಲ್ಲಿದ್ದರೂ ಜವಾಬ್ದಾರಿಯಿಂದ ಮಾತನಾಡಬೇಕು” ಎಂದರು.
ರೈತರ ಬದುಕಿನೊಂದಿಗೆ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ವಿಜಯೇಂದ್ರ, “ನಾವು ನಾಳೆ ಆಡಳಿತಕ್ಕೆ ಬರುವ ಪಕ್ಷ. ಇಂದು ಮಾಧ್ಯಮಗಳ ಮುಂದೆ ಮತ್ತು ರೈತರ ಮುಂದೆ ಮಾತನಾಡುವ ಪ್ರತಿಯೊಂದು ಮಾತಿಗೂ ಜವಾಬ್ದಾರಿ ಇರಬೇಕು. ವಾಸ್ತವಿಕ ಸತ್ಯ ಏನು ಎಂಬುದನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು. ರೈತರ ಸಮಸ್ಯೆಯಲ್ಲಿ ರಾಜಕೀಯ ಲಾಭ ಪಡೆಯುವುದು ನಮ್ಮ ಉದ್ದೇಶವಲ್ಲ” ಎಂದು ಹೇಳಿದರು.
ಭೀಕರ ಬರಗಾಲದ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಲು ಬಿಜೆಪಿ ಒತ್ತಾಯಿಸಿದ ನಂತರ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ಈ ಅಧಿವೇಶನದಲ್ಲಿ ತುಂಗಭದ್ರ ಜಲಾಶಯ, ಸಮಾನಾಂತರ ಜಲಾಶಯ, ನೀರಾವರಿ ಹಾಗೂ ಉತ್ತರ ಕರ್ನಾಟಕದ ರೈತರ ಸಮಸ್ಯೆಗಳ ಕುರಿತು ಸರ್ಕಾರವನ್ನು ಪ್ರಶ್ನಿಸಲಾಗುವುದು ಎಂದು ಅವರು ತಿಳಿಸಿದರು. “ಆಡಳಿತ ಪಕ್ಷಕ್ಕೆ ಇರುವಷ್ಟೇ ಜವಾಬ್ದಾರಿ ವಿರೋಧ ಪಕ್ಷಕ್ಕೂ ಇದೆ. ಸದನದಲ್ಲಿ ಈ ವಿಚಾರಕ್ಕೆ ಧ್ವನಿ ಎತ್ತುತ್ತೇವೆ. ರೈತರ ಸಮಸ್ಯೆಗೆ ಉತ್ತರ ಕಂಡುಕೊಳ್ಳುವವರೆಗೆ ಹೋರಾಟ ಮುಂದುವರಿಸುತ್ತೇವೆ” ಎಂದು ಭರವಸೆ ನೀಡಿದರು.
ರೈತ ಹೋರಾಟಗಾರರ ಮೇಲೆ ಅಟ್ರಾಸಿಟಿ ಪ್ರಕರಣ ಸೇರಿದಂತೆ ವಿವಿಧ ರೀತಿಯಲ್ಲಿ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, “ರೈತರ ಪರವಾಗಿ ಹೋರಾಡುವವರ ಮೇಲೆ ದಬ್ಬಾಳಿಕೆ ನಡೆಸುವುದನ್ನು ಸಹಿಸುವುದಿಲ್ಲ. ಈ ವಿಚಾರವನ್ನು ಸದನದಲ್ಲೂ ಪ್ರಸ್ತಾಪಿಸುತ್ತೇನೆ. ಇದೇ ರೀತಿ ದಬ್ಬಾಳಿಕೆ ಮುಂದುವರಿದರೆ ನಾನೇ ಹೋರಾಟಗಾರರ ಪರವಾಗಿ ನಿಂತು ಧ್ವನಿ ಎತ್ತುತ್ತೇನೆ. ಯಾರೂ ಹೆದರಿಕೊಳ್ಳುವ ಅಗತ್ಯವಿಲ್ಲ” ಎಂದು ಹೇಳಿದರು.











