ಸಾರ್ವಜನಿಕ ಹಣದ ಸಮರ್ಥ ಬಳಕೆ, ತ್ವರಿತ ಲಭ್ಯತೆ ಹಾಗೂ ಆಧುನಿಕ ಕಾರ್ಯಾಚರಣೆಗೆ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಪರಿಶೀಲನೆ
ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ವಾಹನ ವ್ಯವಸ್ಥೆಯನ್ನು ಆಧುನೀಕರಿಸುವ ನಿಟ್ಟಿನಲ್ಲಿ ನೇರ ಖರೀದಿಗೆ ಬದಲಾಗಿ ಬಾಡಿಗೆ ಅಥವಾ ಲೀಸಿಂಗ್ ಮಾದರಿಯನ್ನು ಅಳವಡಿಸಿಕೊಳ್ಳುವ ಸಾಧ್ಯತೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ. ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರು ಗುರುವಾರ ಬೆಂಗಳೂರಿನಲ್ಲಿ ನಡೆಸಿದ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು.
ಪೊಲೀಸ್ ಇಲಾಖೆಯ ಸಂಪರ್ಕ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ ವಿಭಾಗದ ಅಧಿಕಾರಿಗಳು ಹಾಗೂ ವಿದ್ಯುತ್ ಚಾಲಿತ ಮತ್ತು ಸಾಂಪ್ರದಾಯಿಕ ವಾಹನ ತಯಾರಿಕಾ ಕಂಪನಿಗಳು ಸೇರಿದಂತೆ 20ಕ್ಕೂ ಹೆಚ್ಚು ಆಟೋಮೊಬೈಲ್ ಹಾಗೂ ದ್ವಿಚಕ್ರ ವಾಹನ ತಯಾರಕರ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಚಿವರು ವಾಹನಗಳ ಬಳಕೆಯ ಸ್ವರೂಪ, ಕಾರ್ಯಾಚರಣಾ ಅವಧಿ, ನಿರ್ವಹಣೆ, ದುರಸ್ತಿ, ಬದಲಿ ವಾಹನಗಳ ಲಭ್ಯತೆ, ಸೇವಾ ವೆಚ್ಚ ಮತ್ತು ಒಪ್ಪಂದದ ಅವಧಿ ಸೇರಿದಂತೆ ಹಣಕಾಸು ಮತ್ತು ಕಾರ್ಯಾಚರಣಾ ಆಯಾಮಗಳನ್ನು ಕೂಲಂಕಷವಾಗಿ ಚರ್ಚಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, “ಸರ್ಕಾರದ ಉದ್ದೇಶ ಕೇವಲ ವಾಹನಗಳನ್ನು ಖರೀದಿಸುವುದಲ್ಲ. ಸಾರ್ವಜನಿಕರ ಹಣವನ್ನು ವಿವೇಚನೆಯಿಂದ ಬಳಸಿಕೊಂಡು ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ನಮ್ಮ ಆದ್ಯತೆ. ಒಂದೇ ಬಾರಿಗೆ ದೊಡ್ಡ ಮೊತ್ತದ ಬಂಡವಾಳ ವೆಚ್ಚ ಮಾಡುವ ಬದಲು, ಇಲಾಖೆಯ ಅಗತ್ಯಕ್ಕೆ ಅನುಗುಣವಾಗಿ ವಾಹನಗಳನ್ನು ತ್ವರಿತವಾಗಿ ಸೇರ್ಪಡೆ ಮಾಡಿಕೊಳ್ಳುವ ಮತ್ತು ಅವುಗಳ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು” ಎಂದು ತಿಳಿಸಿದರು.
ನೇರ ಖರೀದಿಯಿಂದ ಸರ್ಕಾರದ ಮೇಲೆ ಒಂದೇ ಬಾರಿಗೆ ಗಣನೀಯ ಬಂಡವಾಳ ಹೊರೆ ಬೀಳುತ್ತದೆ. ಆದರೆ ಬಾಡಿಗೆ ಅಥವಾ ಲೀಸಿಂಗ್ ಮಾದರಿಯಿಂದ ವಾಹನಗಳ ಸಂಖ್ಯೆಯನ್ನು ಅಗತ್ಯಕ್ಕೆ ಅನುಗುಣವಾಗಿ ತ್ವರಿತವಾಗಿ ಹೆಚ್ಚಿಸಬಹುದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಗಸ್ತು, ತುರ್ತು ಪ್ರತಿಕ್ರಿಯೆ ಮತ್ತು ತನಿಖೆ ಸೇರಿದಂತೆ ವಿವಿಧ ಕರ್ತವ್ಯಗಳಿಗೆ ವಾಹನಗಳನ್ನು ಹೆಚ್ಚು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ವಿದ್ಯುತ್ ಚಾಲಿತ ವಾಹನಗಳು ಸೇರಿದಂತೆ ವಿವಿಧ ಮಾದರಿಗಳನ್ನು ಪೊಲೀಸ್ ಅಗತ್ಯಗಳಿಗೆ ಹೊಂದಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು. “ಆಧುನಿಕ ಪೊಲೀಸ್ ವ್ಯವಸ್ಥೆಗೆ ಕೇವಲ ಮಾನವ ಸಂಪನ್ಮೂಲ ಸಾಕಾಗುವುದಿಲ್ಲ. ಚಲನಶೀಲತೆ, ತಂತ್ರಜ್ಞಾನ ಮತ್ತು ಮೂಲಸೌಕರ್ಯವೂ ಸಮಾನವಾಗಿ ಮುಖ್ಯ. ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ ಹಾಗೂ ಕಾನೂನು-ಸುವ್ಯವಸ್ಥೆಯ ಸವಾಲುಗಳಿಗೆ ಇಲಾಖೆಯನ್ನು ಇನ್ನಷ್ಟು ಸಜ್ಜಾಗಿಸಬೇಕಿದೆ. ಅದಕ್ಕಾಗಿ ವಾಹನ ವ್ಯವಸ್ಥೆ ಸೇರಿದಂತೆ ಪ್ರತಿಯೊಂದು ಕಾರ್ಯಾಚರಣಾ ಮೂಲಸೌಕರ್ಯವನ್ನು ಆಧುನೀಕರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮಬದ್ಧವಾಗಿ ಕೆಲಸ ಮಾಡುತ್ತಿದೆ” ಎಂದು ಸಚಿವರು ಹೇಳಿದರು.

ಸಾರ್ವಜನಿಕ ಹಣದ ಗರಿಷ್ಠ ಸದ್ಬಳಕೆ ಆಗುವಂತೆ ಹಾಗೂ ದೀರ್ಘಾವಧಿಯಲ್ಲಿ ಸರ್ಕಾರಕ್ಕೆ ಆರ್ಥಿಕ ಮತ್ತು ಆಡಳಿತಾತ್ಮಕವಾಗಿ ಪೂರಕವಾಗುವ ಮಾದರಿಯನ್ನು ರೂಪಿಸಲು ಸರ್ಕಾರ ಬದ್ಧವಾಗಿದೆ. ಬಾಡಿಗೆ ಮಾದರಿಯ ಹಣಕಾಸು ಮತ್ತು ಕಾರ್ಯಾಚರಣಾ ಸಾಧ್ಯತೆಗಳನ್ನು ಸಮಗ್ರವಾಗಿ ಪರಿಶೀಲಿಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಪೊಲೀಸ್ ಇಲಾಖೆಯನ್ನು ಹೆಚ್ಚು ಚಲನಶೀಲ, ತಂತ್ರಜ್ಞಾನಾಧಾರಿತ, ಆಧುನಿಕ ಮತ್ತು ಜನಸ್ನೇಹಿ ವ್ಯವಸ್ಥೆಯನ್ನಾಗಿ ರೂಪಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಸಾರ್ವಜನಿಕ ಸೇವೆಗಳ ಗುಣಮಟ್ಟ ಹೆಚ್ಚಿಸುವ ಜತೆಗೆ ಪೊಲೀಸ್ ಸಿಬ್ಬಂದಿಯ ಕಾರ್ಯಾಚರಣಾ ಸಾಮರ್ಥ್ಯವನ್ನು ಬಲಪಡಿಸುವ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.










