ಹಿಡಕಲ್, ಮಾರ್ಕಂಡೇಯ ಯೋಜನೆಗಳ ಪ್ರಗತಿ ಪರಿಶೀಲನೆ; ಕೇಂದ್ರದ ಅನುದಾನ ಪಾಲು ಅಗತ್ಯ ಎಂದು ಮನವಿ
ಬೆಳಗಾವಿ: ಬಳ್ಳಾರಿ ನಾಲಾ ಯೋಜನೆಯಲ್ಲಿ ಅರಣ್ಯ ಇಲಾಖೆಯ ಅನುಮತಿಯೇ ಇಲ್ಲದೆ 400 ಕೋಟಿ ರೂಪಾಯಿ ವೆಚ್ಚ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ, ಅಧಿಕಾರಿಗಳನ್ನು ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡರು.
ಕರ್ನಾಟಕ ನೀರಾವರಿ ನಿಗಮದ ನೀರಾವರಿ (ಉತ್ತರ) ವಲಯ ಬೆಳಗಾವಿ ವ್ಯಾಪ್ತಿಯ ಪ್ರಮುಖ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಿಗಮದ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ನಡೆಸಿದ ಸಚಿವರು, “ಬಳ್ಳಾರಿ ನಾಲಾದಲ್ಲಿ ನೂತನ ಡ್ಯಾಂ ನಿರ್ಮಾಣಕ್ಕೆ ಸಂಬಂಧಿಸಿ ಈಗಾಗಲೇ 400 ಕೋಟಿ ರೂ. ಖರ್ಚು ಮಾಡಿದ್ದೀರಿ. ಅರಣ್ಯ ಇಲಾಖೆಯ ಅನುಮತಿಯೇ ಇಲ್ಲದೆ ಇಷ್ಟು ಹಣ ಖರ್ಚು ಮಾಡಿ ಸಾಧಿಸಿದ್ದೇನು? ಇಂತಹ ದುಂದುವೆಚ್ಚಕ್ಕೆ ನಿಮಗೆ ಕುಮ್ಮಕ್ಕು ನೀಡುತ್ತಿರುವವರು ಯಾರು?” ಎಂದು ಪ್ರಶ್ನಿಸಿದರು.

“ಇಷ್ಟೊಂದು ವರ್ಷಗಳಿಂದ ಕಾಮಗಾರಿ ಏಕೆ ಪೂರ್ಣಗೊಂಡಿಲ್ಲ? ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಇಲ್ಲದೆ ಡ್ಯಾಂ ನಿರ್ಮಾಣಗೊಳ್ಳಲು ಸಾಧ್ಯವೇ ಇಲ್ಲ. ಕೇವಲ ಕಾಲುವೆಗಳಿಗಾಗಿಯೇ 400 ಕೋಟಿ ರೂ. ಖರ್ಚು ಮಾಡಲಾಗಿದೆ. ಡ್ಯಾಂ ಇಲ್ಲದೆ ಬರೀ ಕಾಲುವೆ ನಿರ್ಮಿಸಿ ಏನು ಮಾಡುತ್ತೀರಿ? ನೀರಿಲ್ಲದ ಕಾಲುವೆಗಳು ಹಾಳಾಗುವುದಿಲ್ಲವೇ?” ಎಂದು ಕಿಡಿಕಾರಿದರು. ಉತ್ತರ ಕರ್ನಾಟಕದಲ್ಲಿ ಅನೇಕ ನೀರಾವರಿ ಯೋಜನೆಗಳ ಪರಿಸ್ಥಿತಿ ಇದೇ ರೀತಿ ಇದೆ ಎಂದು ಹೇಳಿದ ಸಚಿವರು, ಸಾರ್ವಜನಿಕ ಹಣವನ್ನು ದುಂದುವೆಚ್ಚ ಮಾಡುವುದು ಸರಿಯಲ್ಲ. ಜವಾಬ್ದಾರಿಯಿಂದ ವರ್ತಿಸಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
2005ರಲ್ಲಿ 135 ಕೋಟಿ ರೂ. ಅಂದಾಜು ವೆಚ್ಚದಿಂದ ಪ್ರಾರಂಭವಾಗಿದ್ದ ಬಳ್ಳಾರಿ ನಾಲಾ ಯೋಜನೆಯ ವೆಚ್ಚ ಈಗ 635 ಕೋಟಿಗೆ ಏರಿಕೆಯಾಗಿದೆ. ಯೋಜನಾ ವೆಚ್ಚ ಹೆಚ್ಚಳಕ್ಕೆ ನಿಗಮದ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದು, ಅರಣ್ಯ ಇಲಾಖೆಯ ಅನುಮತಿ ಪಡೆದ ನಂತರವೇ ಟೆಂಡರ್ ಪ್ರಕ್ರಿಯೆಗೆ ಹೋಗುವಂತೆ ಸೂಚಿಸಿದರು. ಪರಿಹಾರಾತ್ಮಕ ಅರಣ್ಯೀಕರಣಕ್ಕೆ (CA Land) ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ಗುರುತಿಸಿರುವ ಜಮೀನನ್ನು ತಕ್ಷಣ ಹಸ್ತಾಂತರಿಸುವಂತೆ ನಿರ್ದೇಶನ ನೀಡಿದರು.

ಹಿಡಕಲ್ ಡ್ಯಾಂ ಆಧುನೀಕರಣಕ್ಕೆ 3,650 ಕೋಟಿ ರೂ. ಡಿಪಿಆರ್
ಹಿಡಕಲ್ ಡ್ಯಾಂ ವ್ಯಾಪ್ತಿಯ ಕಾಲುವೆಗಳ ದುರಸ್ತಿ, ಸೋರಿಕೆ ತಡೆ ಮತ್ತು ಆಧುನೀಕರಣಕ್ಕಾಗಿ 3,650 ಕೋಟಿ ರೂ. ಮೊತ್ತದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸಲಾಗಿದೆ. ಈ ಯೋಜನೆ ಪೂರ್ಣಗೊಂಡರೆ ಎಡದಂಡೆ ವ್ಯಾಪ್ತಿಯ ಸಮಸ್ಯೆಗಳು ಬಗೆಹರಿಯಲಿವೆ. ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಪ್ರತ್ಯೇಕ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಸಚಿವರು ತಿಳಿಸಿದರು.
ಮಾರ್ಕಂಡೇಯ ಡ್ಯಾಂ ಬಲವರ್ಧನೆಗೆ ಸೂಚನೆ ನೀಡಿದ ಸಚಿವರು, “ಗ್ಯಾಲರಿ ತುಂಬಿಕೊಂಡಿದೆ. ಡ್ಯಾಂ ಬಲವರ್ಧನೆ ಕೆಲಸ ಕೈಗೊಳ್ಳಿ. ಬಾಕಿ ಕಾಮಗಾರಿಗೆ ಅಗತ್ಯವಿರುವ 92 ಕೋಟಿ ರೂ. ಅನುದಾನ ಬಿಡುಗಡೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ವಿತರಣಾ ಕಾಲುವೆಗಳನ್ನು ಮೊದಲು ಪೂರ್ಣಗೊಳಿಸಿ” ಎಂದು ಗಡುವು ವಿಧಿಸಿದರು. ಹಿಡಕಲ್, ಮಾರ್ಕಂಡೇಯ ಮತ್ತು ಬಳ್ಳಾರಿ ನಾಲಾ ಸೇರಿದಂತೆ ಪ್ರಮುಖ ಐದು ಯೋಜನೆಗಳ ಸಮಗ್ರ ಮಾಹಿತಿಯನ್ನು ಸಂಜೆಯೊಳಗೆ ಸಲ್ಲಿಸುವಂತೆ ತಾಕೀತು ಮಾಡಿದರು.

ಕೇಂದ್ರದ ಅನುದಾನ ಪಾಲು ಅಗತ್ಯ
ಸುವರ್ಣಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನೀರಾವರಿ ಇಲಾಖೆಗೆ ರಾಜ್ಯ ಸರ್ಕಾರ ಸಾಕಷ್ಟು ಹಣ ಒದಗಿಸಿದ್ದರೂ ಇನ್ನಷ್ಟು ಹೆಚ್ಚಿಸಬೇಕು ಎಂದು ಹೇಳಿದರು. “ಯೋಜನೆಗಳು ನಿಗದಿತ ಸಮಯಕ್ಕೆ ಪೂರ್ಣಗೊಳ್ಳದಿದ್ದರೆ ಬಜೆಟ್ ಹೊರೆಯಾಗುತ್ತದೆ. ಕೇಂದ್ರ ಸರ್ಕಾರವು ರಾಜ್ಯದೊಂದಿಗೆ ಪಾಲುದಾರಿಕೆಯಲ್ಲಿ ಅನುದಾನ ನೀಡಬೇಕು” ಎಂದು ಮನವಿ ಮಾಡಿದರು. ಬಳ್ಳಾರಿ ನಾಲಾ ಯೋಜನೆಯ ವೆಚ್ಚ 130 ಕೋಟಿಯಿಂದ ಈಗ 2 ಸಾವಿರ ಕೋಟಿ ರೂ. ಮೀರಿದೆ ಎಂದು ಉಲ್ಲೇಖಿಸಿದರು.
ಮಹದಾಯಿ ಯೋಜನೆ ಸಂಪೂರ್ಣವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಕೈಯಲ್ಲಿದೆ. ಕುಡಿಯುವ ನೀರಿಗೆ ನ್ಯಾಯಾಲಯದಲ್ಲಿ ಮೊದಲ ಆದ್ಯತೆ ಇದೆ. ಚಳಿಗಾಲದ ಅಧಿವೇಶನಕ್ಕೂ ಮುನ್ನ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಇಲಾಖೆಯಲ್ಲಿ ಶೇ.60ರಷ್ಟು ಹುದ್ದೆಗಳು ಖಾಲಿ ಇರುವುದನ್ನು ಗಮನಿಸಿ, ಮುಖ್ಯಮಂತ್ರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸುವುದಾಗಿ ಹೇಳಿದರು.

ಮಹಾರಾಷ್ಟ್ರ ಸರ್ಕಾರವು ಹೆಚ್ಚುವರಿ ನೀರನ್ನು ಲಿಫ್ಟ್ ಮಾಡಿ ಬೇರೆಡೆ ತಿರುಗಿಸುವ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿಗಳ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. ನೀರಾವರಿ ಯೋಜನೆಗಳ ಸೂಕ್ತ ನಿರ್ವಹಣೆ ಮತ್ತು ಅನಧಿಕೃತ ಪಂಪಿಂಗ್ ತಡೆಗೆ ಸಮಗ್ರ ‘ನೀರಾವರಿ ಕಾಯ್ದೆ’ ರೂಪಿಸುವ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಹಿಪ್ಪರಗಿ, ಘಟಪ್ರಭಾ, ದೂಧ್ಗಂಗಾ ಸೇರಿದಂತೆ ಉತ್ತರ ವಲಯದ ಒಟ್ಟು 17 ಯೋಜನೆಗಳ ಪ್ರಗತಿ ಪರಿಶೀಲನೆ ನಡೆಯಿತು. ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಥೋಡ್, ವಲಯದ ಮುಖ್ಯ ಎಂಜಿನಿಯರ್ ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್ಗಳು ಉಪಸ್ಥಿತರಿದ್ದರು.











