“ಸತ್ಯನಿಷ್ಠೆಯಿಂದ ಸಮೃದ್ಧಿ” ಧ್ಯೇಯವಾಕ್ಯದೊಂದಿಗೆ ಅಕ್ಟೋಬರ್ 26ರಿಂದ ನವೆಂಬರ್ 1ರವರೆಗೆ ಆಚರಣೆ
ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಅಕ್ಟೋಬರ್ 26ರಿಂದ ನವೆಂಬರ್ 1ರವರೆಗೆ “ಜಾಗೃತಿ ಅರಿವು ಸಪ್ತಾಹ-2026” ಆಚರಿಸಲಾಗುತ್ತಿದೆ. ಈ ವರ್ಷದ ಸಪ್ತಾಹವನ್ನು “ಸತ್ಯನಿಷ್ಠೆಯಿಂದ ಸಮೃದ್ಧಿ” (Vigilance: Probity for Prosperity) ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸಿಆಸುಇ) ಸುತ್ತೋಲೆ ಹೊರಡಿಸಿ ಈ ಕುರಿತು ಸೂಚನೆ ನೀಡಿದೆ. ಸಪ್ತಾಹದ ಅಂಗವಾಗಿ ಅಕ್ಟೋಬರ್ 27ರಂದು ಪೂರ್ವಾಹ್ನ 11 ಗಂಟೆಗೆ ವಿಕಾಸ ಸೌಧದ 3ನೇ ಮಹಡಿಯ ಕೊಠಡಿ ಸಂಖ್ಯೆ 318ರಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವಾಲಯದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರಿಗೆ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ವಚನ ಬೋಧಿಸಲಿದ್ದಾರೆ.

ಕೇಂದ್ರ ವಿಚಕ್ಷಣಾ ಆಯೋಗದ (ಸಿವಿಸಿ) ನಿರ್ದೇಶನದಂತೆ ರಾಜ್ಯ ಸರ್ಕಾರದ ಎಲ್ಲಾ ಆಡಳಿತ ವಿಭಾಗಗಳು, ಸ್ವಾಯತ್ತ ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆಗಳು ಈ ಸಪ್ತಾಹದಡಿ ವಿವಿಧ ಜಾಗೃತಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಸಪ್ತಾಹ ಮುಕ್ತಾಯಗೊಂಡ ಒಂದು ವಾರದೊಳಗೆ ಸಂಬಂಧಪಟ್ಟ ಇಲಾಖೆಗಳು ಸಿಆಸುಇ (ಜಾಗೃತ ವಿಭಾಗ)ಗೆ ಅನುಪಾಲನಾ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗಳು ನಿರ್ದೇಶಿಸಿದ್ದಾರೆ.











