ರಾಜ್ಯಾದ್ಯಂತ ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ಪರಿಚಯಿಸಲು ಚಿಂತನೆ
ಹಾಲು ಉತ್ಪಾದಕರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಕೆಲಸ: ಡಿ.ಕೆ. ಸುರೇಶ್
ಬೆಂಗಳೂರು: ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್)ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ನಿಕಟಪೂರ್ವ ಸಂಸದ ಡಿ.ಕೆ. ಸುರೇಶ್ ಅವರು ಅಧ್ಯಕ್ಷರಾಗಿ ಹಾಗೂ ಕುದೂರು ರಾಜಣ್ಣ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಮೂಲ್ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಸುರೇಶ್ ಅವರು ಬೆಂಗಳೂರು ಡೈರಿ ಸರ್ಕಲ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಈ ಸ್ಥಾನಕ್ಕೆ ಬೇರೆ ಯಾವುದೇ ಉಮೇದುವಾರರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುರೇಶ್, ತಮ್ಮ ಆಯ್ಕೆಯ ಬಗ್ಗೆ ವಿವರಿಸಿದರು.
“ಬಮೂಲ್ನ 16 ನಿರ್ದೇಶಕರ ಪೈಕಿ 14 ಜನ ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆ, ಇಬ್ಬರು ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ನಿರ್ದೇಶಕರು ನನ್ನನ್ನು ಅಧ್ಯಕ್ಷರಾಗಿ ಮತ್ತು ಮಾಗಡಿ ತಾಲೂಕಿನ ಕುದೂರು ರಾಜಣ್ಣ ಅವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ,” ಎಂದು ಅವರು ತಿಳಿಸಿದರು.
“ನಮ್ಮ ಪಕ್ಷದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ, ಶಾಸಕರಾದ ಬಾಲಕೃಷ್ಣ, ಸಿ.ಪಿ. ಯೋಗೇಶ್ವರ್, ಇಕ್ಬಾಲ್ ಹುಸೇನ್, ಶಿವಣ್ಣ, ಶರತ್ ಬಚ್ಚೇಗೌಡ, ಕೃಷ್ಣಭೈರೇಗೌಡ ಸೇರಿದಂತೆ ಬಮೂಲ್ ವ್ಯಾಪ್ತಿಯ ಎಲ್ಲಾ ಶಾಸಕರ ಸರ್ವಸಮ್ಮತ ತೀರ್ಮಾನದಿಂದ ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ,” ಎಂದು ಸುರೇಶ್ ಹೇಳಿದರು.
“ಈ ಅವಕಾಶದಲ್ಲಿ ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಸಹಕಾರ ಸಂಸ್ಥೆಯ ಜವಾಬ್ದಾರಿಯನ್ನು ನನಗೆ ವಹಿಸಲಾಗಿದೆ. ಬಮೂಲ್ನ ಹಾಲು ಉತ್ಪಾದಕರು ಮತ್ತು ರೈತರು ನಮ್ಮ ಮೇಲೆ ನಿರೀಕ್ಷೆ ಇರಿಸಿ ಗೆಲ್ಲಿಸಿದ್ದಾರೆ. ಅವರಿಗೆ ಧನ್ಯವಾದ ತಿಳಿಸುತ್ತೇನೆ. ರೈತರ ನಿರೀಕ್ಷೆಗೆ ತಕ್ಕಂತೆ ಬದಲಾವಣೆ ತಂದು, ಸಂಘಕ್ಕೆ ಮತ್ತು ರೈತರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ,” ಎಂದು ಅವರು ಭರವಸೆ ನೀಡಿದರು.
ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ವಿಸ್ತರಣೆ ಯೋಜನೆ
ಕನಕಪುರ ಹಾಲು ಒಕ್ಕೂಟದಲ್ಲಿ ಇತ್ತೀಚೆಗೆ ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ಪರಿಚಯಿಸಲಾಗಿದ್ದು, ಇದನ್ನು ಬಮೂಲ್ಗೆ ವಿಸ್ತರಿಸುವ ಕುರಿತು ಕೇಳಿದಾಗ, ಸುರೇಶ್, “ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ಗಳನ್ನು ಕರ್ನಾಟಕದಾದ್ಯಂತ ಪರಿಚಯಿಸುವ ಚಿಂತನೆ ಇದೆ. ಪ್ರಾಯೋಗಿಕವಾಗಿ ಒಂದು ಪಂಚಾಯಿತಿ ಮಟ್ಟದಲ್ಲಿ ಇದನ್ನು ವಿತರಿಸಲಾಗಿದೆ. ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಇದರ ಸಾಧಕ-ಬಾಧಕಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸಿ, ಹಾಲು ಉತ್ಪಾದಕರಿಗೆ ನ್ಯಾಯ ಒದಗಿಸುವ ಜವಾಬ್ದಾರಿಯನ್ನು ಹಂತಹಂತವಾಗಿ ಈಡೇರಿಸುತ್ತೇವೆ,” ಎಂದರು.
“ಆಡಳಿತ ಮಂಡಳಿಯ ಎಲ್ಲ ಸದಸ್ಯರು ಒಗ್ಗೂಡಿ, ಸಂಘದ ಸಮಸ್ಯೆಗಳ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಬದಲಾವಣೆ ತರಬೇಕಿದೆ. ಈ ಕಾರ್ಯದಲ್ಲಿ ಮಾಧ್ಯಮಗಳು ಸೇರಿದಂತೆ ಎಲ್ಲರ ಸಹಕಾರ ಕೋರುತ್ತೇನೆ,” ಎಂದು ಅವರು ಮನವಿ ಮಾಡಿದರು.
ರೈತರಿಗೆ ಸಂದೇಶ
ರೈತರಿಗೆ ಸಂದೇಶ ನೀಡುವಂತೆ ಕೇಳಿದಾಗ, “ರೈತರ ಬದುಕು ಹಾಲಿನ ಕ್ಷೇತ್ರದೊಂದಿಗೆ ಬೆಸೆದಿದೆ. ನೀವು ನನ್ನ ಮೇಲೆ ಮತ್ತು ಒಕ್ಕೂಟದ ಮೇಲೆ ಇರಿಸಿದ ನಂಬಿಕೆಗೆ ನ್ಯಾಯ ಒದಗಿಸಲು ಬದಲಾವಣೆ ತರುವ ಪ್ರಯತ್ನ ಮಾಡುತ್ತೇನೆ,” ಎಂದು ಸುರೇಶ್ ತಿಳಿಸಿದರು.