ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುತ್ತೇವೆ
ಬೆಂಗಳೂರು: ರೈತರಿಗೆ ಮಾತ್ರವಲ್ಲ, ಕಾರ್ಖಾನೆ ಮಾಲೀಕರಿಗೂ ಅನ್ಯಾಯವಾಗಬಾರದು ಎಂಬ ನಿಲುವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಕಬ್ಬು ಬೆಲೆ ಹೆಚ್ಚಳಕ್ಕಾಗಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ಸಮತೋಲಿತ ನಿಲುವು ಅನುಸರಿಸಲಾಗುವುದು ಎಂದು ಭರವಸೆ ನೀಡಿದರು.
“ನಾವು ಕೂಡ ರೈತ ಕುಟುಂಬದವರು. ಕಾರ್ಖಾನೆ ಇದ್ದ ಕಾರಣಕ್ಕೆ ರೈತರ ಕಷ್ಟ ಗೊತ್ತಿಲ್ಲ ಎಂದಲ್ಲ. ರೈತರಿಗೆ ಅನ್ಯಾಯವಾಗಬಾರದು, ಕಾರ್ಖಾನೆ ಮಾಲೀಕರಿಗೂ ಅನ್ಯಾಯವಾಗಬಾರದು” ಎಂದು ಸಚಿವರು ಹೇಳಿದರು.
ಈಗಾಗಲೇ ಈ ಕುರಿತು ಎರಡು ಬಾರಿ ಸಭೆ ನಡೆಸಲಾಗಿದೆ. ತಾವು ಬ್ಯುಸಿ ಇದ್ದ ಕಾರಣ ಮೀಟಿಂಗ್‌ನಲ್ಲಿ ಭಾಗಿಯಾಗಿರಲಿಲ್ಲ ಎಂದ ಅವರು, ತಮ್ಮ ತಮ್ಮ ಮತ್ತು ಮಗ ರೈತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು. “ಕಾರ್ಖಾನೆ ಮಾಲೀಕರು ಮತ್ತು ರೈತರು ಸೇರಿ ಸಭೆ ನಡೆಸುತ್ತೇವೆ. ದರದ ಬಗ್ಗೆ ಮಾತನಾಡಲು ಹೋದರೆ ಬೇರೆ ರೀತಿ ಆಗುತ್ತದೆ. ರೈತರಿಗೆ ದಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳಬಾರದು” ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ರಾಜಕಾರಣಕ್ಕೆ ತಿರುಗೇಟು
ರೈತರ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರು ಭಾಗಿಯಾಗಿರುವ ಬಗ್ಗೆ ಪ್ರಶ್ನಿಸಿದಾಗ, “ರೈತರ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಲಿ. ರಾಜಕೀಯ ಬಿಟ್ಟು ಪ್ರತಿಭಟನೆಗೆ ಹೋಗಲಿ. ಬಿಜೆಪಿಯ ರೈತಪರ ಹೋರಾಟ ನಮಗೂ ಗೊತ್ತು, ನಿಮಗೂ ಗೊತ್ತು” ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರ ರೈತರ ಪ್ರತಿಭಟನೆಯನ್ನು ಹತ್ತಿಕ್ಕಿದ ಉದಾಹರಣೆಗಳನ್ನು ನೆನಪಿಸಿದ ಅವರು, “ಎಷ್ಟು ಜನ ರೈತರು ತೀರಿಕೊಂಡರು ಎನ್ನುವುದು ಎಲ್ಲರಿಗೂ ಗೊತ್ತು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇರಲಿ. ಸದ್ಯಕ್ಕೆ ನಾನು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ” ಎಂದು ಹೇಳಿದರು.
ರಾಹುಲ್ ಗಾಂಧಿ ಭಾಗಿಯಾಗುವ ನಿರೀಕ್ಷೆ
ನವೆಂಬರ್ 19ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಆಹ್ವಾನಿಸಲಾಗಿದೆ. “ನವೆಂಬರ್ 19 ಮತ್ತು 20ರಂದು ಸಮಯ ಕೇಳಿದ್ದೇವೆ. ಬೆಂಗಳೂರಿನಲ್ಲಿ ಟೆಕ್ ಶೃಂಗ ಸಭೆ ನಡೆಯುತ್ತಿದ್ದು, ಸಮಯ ಹೊಂದಿಸಿಕೊಂಡು ಬರುವುದಾಗಿ ತಿಳಿಸಿದ್ದಾರೆ” ಎಂದು ಸಚಿವರು ತಿಳಿಸಿದರು.
ಅಂಗನವಾಡಿಗಳನ್ನ ಮೊದಲ ಬಾರಿಗೆ ಮೈಸೂರಿನಲ್ಲಿ ಆರಂಭಿಸಿದ್ದು ಇಂದಿರಾ ಗಾಂಧಿ ಎಂದು ನೆನಪಿಸಿದ ಅವರು, “ಬಡ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ಒದಗಿಸುವ ಉದ್ದೇಶದಿಂದ ಆರಂಭವಾದ ಈ ಯೋಜನೆ ಈಗ 50 ವರ್ಷ ಪೂರೈಸಿದೆ. ಈ ಸುವರ್ಣ ಸಂಭ್ರಮವನ್ನ ಭವ್ಯವಾಗಿ ಆಚರಿಸಲಾಗುತ್ತಿದೆ” ಎಂದು ಹೇಳಿದರು.












