ಬೆಂಗಳೂರು: ಸಚಿವ ಬಿ.ನಾಗೇಂದ್ರ ಕಳಂಕಿತರಾಗಿದ್ದು, ಮುಖ್ಯಮಂತ್ರಿಗೆ ಬೆದರಿಕೆ ಹಾಕಿದ್ದರಿಂದಲೇ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ, ಅವರನ್ನು ಸಚಿವ ಸಂಪುಟದಿಂದ ತೆಗೆದುಹಾಕಲು ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಹೋರಾಟ ಮಾಡಲಿರುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟರಿಗೆ ಸೇರಿದ 187 ಕೋಟಿ ರೂಪಾಯಿ ಹಣವನ್ನು ಲೂಟಿ ಮಾಡಿದ ಆರೋಪ ಸಚಿವ ಬಿ.ನಾಗೇಂದ್ರ ಅವರ ಮೇಲಿದೆ ಎಂದು ಹೇಳಿದರು. “ಅವರು ಕಳಂಕಿತರಾಗಿದ್ದು, ಕೋರ್ಟ್ ಆದೇಶವನ್ನು ಉಲ್ಲಂಘಿಸಿ ದೆಹಲಿಗೆ ಪ್ರಯಾಣ ಮಾಡಿದ್ದಾರೆ. ಅವರ ವಿರುದ್ಧ ಇನ್ನೂ ತನಿಖೆ ನಡೆಯುತ್ತಿದೆ. ಅವರಿಗೆ ಸಚಿವ ಸಂಪುಟದಲ್ಲಿ ಇರಲು ಯೋಗ್ಯತೆ ಇಲ್ಲ” ಎಂದು ಅಶೋಕ ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬೆದರಿಕೆ ಹಾಕಿರುವುದರಿಂದಲೇ ನಾಗೇಂದ್ರ ಸಚಿವರಾಗಿರಬಹುದು ಎಂದು ಅವರು ಆರೋಪಿಸಿದರು. ನಿಗಮದ ಹಣವನ್ನು ಕಾಂಗ್ರೆಸ್ ಚುನಾವಣೆಗೆ ಬಳಸಲಾಗಿದೆ ಎಂದು ಹೇಳಿದ ಅಶೋಕ, “ಈ ಹಣ ಎಲ್ಲಿ ಬಳಕೆಯಾಗಿದೆ, ಎಲ್ಲಿಗೆ ರವಾನೆಯಾಗಿದೆ ಎಂಬ ಬಗ್ಗೆ ಸಿಬಿಐ ತನಿಖೆಯ ಚಾರ್ಜ್‌ಶೀಟ್‌ನಲ್ಲಿ ವಿವರವಿದೆ. ಅವರು ರಾಜೀನಾಮೆ ಕೊಟ್ಟಿದ್ದು ಏಕೆ ಎಂದು ಎಲ್ಲರಿಗೂ ಗೊತ್ತಿದೆ. ಕಳಂಕಿತರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿದರೆ ಅದರಿಂದ ಇಡೀ ಸಂಪುಟವೇ ಕಳಂಕಿತವಾಗುತ್ತದೆ” ಎಂದು ಎಚ್ಚರಿಸಿದರು.

ಈ ವಿಷಯದ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಿದೆ ಎಂದು ತಿಳಿಸಿದ ಅವರು, ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಯಲಿದೆ ಎಂದು ಹೇಳಿದರು. ಬಿಡದಿ ಟೌನ್‌ಶಿಪ್ ಯೋಜನೆ, ಸಚಿವ ನಾಗೇಂದ್ರ ಅವರ ಮೇಲಿನ ಆರೋಪ, ಕೆಪಿಎಸ್‌ಸಿ ಹಗರಣ ಮೊದಲಾದ ವಿಷಯಗಳ ವಿರುದ್ಧ ಜೆಡಿಎಸ್ ಜೊತೆಗೆ ಸೇರಿ ಒಂದಾಗಿ ಹೋರಾಟ ಮಾಡಲಾಗುವುದು ಎಂದು ಅಶೋಕ ಸ್ಪಷ್ಟಪಡಿಸಿದರು.
“ಈವರೆಗೆ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸುವುದೇ ಚರ್ಚೆಯಾಗುತ್ತಿತ್ತು. ಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಕ್ಕೆ ಬಂದ ನಂತರ ಇನ್ನೂ ಖಾತೆಯ ಕ್ಯಾತೆಯೇ ಚರ್ಚೆಯಾಗುತ್ತಿದೆ. ಶಾಸಕರು ಹಾಗೂ ಅವರ ಬೆಂಬಲಿಗರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಈ ಸರ್ಕಾರ ಆಡಳಿತ ನಡೆಸದೆ ಕೇವಲ ಇಂತಹ ವಿಷಯಗಳಲ್ಲೇ ಕಾಲಹರಣ ಮಾಡುತ್ತಿದೆ. ಇಂತಹ ಭ್ರಷ್ಟ ಸರ್ಕಾರವನ್ನು ತೊಲಗಿಸಬೇಕಿದೆ” ಎಂದು ಅವರು ತೀವ್ರ ಟೀಕೆ ಮಾಡಿದರು.











