ಬೆಂಗಳೂರು: ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯಲ್ಲೇ ಬಡ ದುಡಿಯುವ ಮಹಿಳೆಯರ ಮಕ್ಕಳಿಗಾಗಿ ನಡೆಸಲಾಗುತ್ತಿದ್ದ ‘ಕೂಸಿನ ಮನೆ’ಗಳು ಬಂದ್ ಆಗಿರುವುದನ್ನು ಬಿಜೆಪಿ ನಾಯಕ ಆರ್. ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ.
“ಕಲಬುರಗಿ ಜಿಲ್ಲೆಯಲ್ಲೇ 127 ‘ಕೂಸಿನ ಮನೆ’ಗಳು ಬಂದ್ ಆಗಿವೆ. ಕಾರ್ಯನಿರ್ವಹಿಸುತ್ತಿರುವುದು ಕೇವಲ 66 ಮಾತ್ರ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಟ್ಟು 538 ‘ಕೂಸಿನ ಮನೆ’ಗಳು ಲಾಕ್ ಆಗಿವೆ” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಆರೋಪಿಸಿದ್ದಾರೆ.
ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದಿಂದ ಅನುದಾನ ಸಿಗದ ಕಾರಣ, ಮಕ್ಕಳ ಆರೈಕೆ ಮಾಡುವ ಬಡ ಸಿಬ್ಬಂದಿಗೆ ತಿಂಗಳುಗಳಿಂದ ಗೌರವಧನವೂ ಪಾವತಿಯಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ. ತಾಯಿ ಕೂಲಿ ಕೆಲಸಕ್ಕೆ ಹೋದಾಗ ಮಗುವನ್ನು ಸುರಕ್ಷಿತವಾಗಿ ಬಿಡಲು ಇದ್ದ ಈ ಕೇಂದ್ರಗಳನ್ನು ಮುಚ್ಚಿ ‘ಬಡವರ ಪರ ಸರ್ಕಾರ’ ಎಂದು ಡಂಗುರ ಸಾರುವುದು ಆತ್ಮಸಾಕ್ಷಿಗೆ ಹೇಗೆ ಒಪ್ಪುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸಚಿವರಾಗಿದ್ದ ಇಲಾಖೆಯ ಯೋಜನೆಯೇ ಅವರ ಜಿಲ್ಲೆಯಲ್ಲಿ ನೆಲಕಚ್ಚಿದೆ ಎಂದು ಆರೋಪಿಸಿದ ಅಶೋಕ್, ಅಸಮರ್ಥತೆ, ಬೇಜವಾಬ್ದಾರಿ ಮತ್ತು ವೈಫಲ್ಯಕ್ಕೆ ಇದೇ ಸಾಕ್ಷಿ ಎಂದು ಹೇಳಿದ್ದಾರೆ.
ತಕ್ಷಣವೇ ಗ್ರಾಮ ಪಂಚಾಯಿತಿಗಳಿಗೆ ಬಾಕಿ ಅನುದಾನ ಬಿಡುಗಡೆ ಮಾಡಬೇಕು, ಆರೈಕೆದಾರ ಸಿಬ್ಬಂದಿಯ ಗೌರವಧನ ಪಾವತಿಸಬೇಕು ಹಾಗೂ ಮುಚ್ಚಿರುವ ಎಲ್ಲಾ 127 ‘ಕೂಸಿನ ಮನೆ’ಗಳನ್ನು ಪುನರಾರಂಭಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗುವುದು ಸುಲಭವಾದರೂ, ಬಡ ಮಕ್ಕಳ ಆಸರೆಯಾಗಿದ್ದ ಈ ಕೇಂದ್ರಗಳ ಬೀಗ ತೆರೆಯುವುದು ನಿಜವಾದ ಆಡಳಿತದ ಪರೀಕ್ಷೆ. ಈ ಪರೀಕ್ಷೆಯಲ್ಲಿ ಸಂಪೂರ್ಣವಾಗಿ ಫೇಲ್ ಆಗಿದ್ದೀರಿ ಎಂದು ಅವರು ಪ್ರಿಯಾಂಕ್ ಖರ್ಗೆ ಅವರನ್ನು ಟೀಕಿಸಿದ್ದಾರೆ.











