ಬೆಳಗಾವಿ: ಕಬ್ಬು ಮತ್ತು ಸಕ್ಕರೆ ಬೆಲೆ ನಿಗದಿಯಲ್ಲಿ ಕೇಂದ್ರ ಸರ್ಕಾರದ ಪಾತ್ರವೇ ದೊಡ್ಡದು ಎಂದು ರಾಜ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಎಫ್‌ಆರ್‌ಪಿ (ಫೇರ್ ಅಂಡ್ ರಿಮ್ಯೂನರೇಟಿವ್ ಪ್ರೈಸ್) ಮತ್ತು ಸಕ್ಕರೆ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಸೇರಿದ್ದು, ಇದರಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ಅಧಿವೇಶನದ ಹಿನ್ನೆಲೆಯಲ್ಲಿ ಮಾತನಾಡಿದ ಸಚಿವರು, ಹಿಂದೆಯೂ ಈ ವಿಚಾರದಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಂಡಿತ್ತು ಮತ್ತು ಈಗಲೂ ಅದೇ ರೀತಿ ಮಾಡುತ್ತಿದೆ ಎಂದು ತಿಳಿಸಿದರು. “ಕಾರ್ಖಾನೆ ಮಾಲೀಕರನ್ನು ನಾವು ಒಪ್ಪಿಸಿದ್ದೆವು. ಪ್ರತಿ ಟನ್‌ಗೆ 3200 ರೂ.ಗೆ ಒಪ್ಪಿಸಿದ್ದೆವು. ಆದರೆ ರೈತ ಸಂಘಟನೆಗಳು ಒಪ್ಪಲಿಲ್ಲ” ಎಂದು ಅವರು ಹೇಳಿದರು.
ಪ್ರತಿಭಟನೆಗಳ ಹಿಂದೆ ರಾಜಕೀಯ ಕೈವಾಡ ಇಲ್ಲ ಎಂದು ನಿರಾಕರಿಸಿದ ಸತೀಶ್ ಜಾರಕಿಹೊಳಿ, ಇದನ್ನು ಬಿಜೆಪಿ ನಾಯಕರು ಮಾಡಬೇಕು ಎಂದು ಆಗ್ರಹಿಸಿದರು. “ದೆಹಲಿಗೆ ಹೋಗಿ ಅವರು ಮಾಡಬೇಕು. ಅಲ್ಲಿ ಹೋಗಿ ಮಲಗಿದ್ರೆ ಹೇಗೆ? ಸಕ್ಕರೆ ಬೆಲೆ ಹೆಚ್ಚಳ ಮಾಡುವ ಅಧಿಕಾರ ಕೇಂದ್ರಕ್ಕೆ ಇದ್ದು, ಬಿಜೆಪಿಯವರೇ ಪ್ರತಿಭಟನೆ ಮಾಡಬೇಕು. ತಕ್ಷಣ ದೆಹಲಿಗೆ ಹೋಗಿ ಕಬ್ಬು-ಸಕ್ಕರೆ ಬೆಲೆ ಹೆಚ್ಚಳಕ್ಕೆ ಒತ್ತಡ ಹೇರಬೇಕು. ಇದರಲ್ಲಿ ನಮ್ಮ ರಾಜ್ಯ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ, ಎಲ್ಲವೂ ಕೇಂದ್ರ ಸರ್ಕಾರದ ಮೇಲೆಯೇ ಅವಲಂಬಿತ” ಎಂದು ಅವರು ಒತ್ತಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ 200 ರೂ. ಹೆಚ್ಚಳಕ್ಕೆ ಸಂಬಂಧಿಸಿದ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, “ಇವತ್ತು ಕ್ಯಾಬಿನೆಟ್ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರುತ್ತದೆ” ಎಂದು ತಿಳಿಸಿದರು. ಬೇರೆ ರಾಜ್ಯಗಳಿಗೆ ಕಬ್ಬು ಹೋಗುವ ಸಾಧ್ಯತೆಯಿದ್ದರೂ, ದೊಡ್ಡ ಮಟ್ಟದಲ್ಲಿ ಹೋಗುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಈ ಬಾರಿ ಪ್ರತಿಭಟನೆಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ ಎಂದು ಅವರು ಗಮನ ಸೆಳೆದರು.
ಸರ್ಕಾರಕ್ಕೆ ಸಲಹೆ ನೀಡುತ್ತಾ, “ಸರ್ಕಾರ ಅವರನ್ನು ಕನ್ವಿನ್ಸ್ ಮಾಡಬೇಕು. ಮಹಾರಾಷ್ಟ್ರದ ಅಂಕಿ-ಅಂಶಗಳನ್ನು ತರಿಸಿಕೊಳ್ಳಬೇಕು. ಹೀಗಿದೆ, ಹೀಗೆ ಮಾಡಬೇಕು ಎಂಬ ರೀತಿಯಲ್ಲಿ ತರಿಸಿ ಗಮನ ಹರಿಸಬೇಕು” ಎಂದು ಸಚಿವ ಸತೀಶ್ ಜಾರಕಿಹೊಳಿ ಸೂಚಿಸಿದರು.
ದೆಹಲಿ ಭೇಟಿಯ ವಿಚಾರದಲ್ಲಿ, “ಈಗ ಬರಿ ಕಬ್ಬು ವಿಚಾರಕ್ಕೆ ಮಾತ್ರ ಹೇಳೋದು. ದೆಹಲಿಯದ್ದು ಆಮೇಲೆ ನೋಡೋಣ. 14 ಮುಗಿಯಲಿ, ಆಮೇಲೆ ನೋಡೋಣ” ಎಂದು ಸಾವ್ಕಾರ್ ಹೇಳಿದ್ದಾರೆ ಎಂದು ಸಚಿವರು ಉಲ್ಲೇಖಿಸಿದರು.












