ಬೆಂಗಳೂರು ನಗರದ ಆಸ್ತಿ ದಾಖಲೆಗಳ ಡಿಜಿಟಲೀಕರಣದಲ್ಲಿ ದೊಡ್ಡ ಪ್ರಗತಿ ಸಾಧಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಖಾತಾ ಪತ್ರಗಳ ವಿತರಣಾ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಬೆಂಗಳೂರು ನಗರದಾದ್ಯಂತ ಇದುವರೆಗೆ 25 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 9 ಲಕ್ಷ ಇ-ಖಾತೆಗಳನ್ನು ಜನರಿಗೆ ಹಂಚಲಾಗಿದೆ. ಎಲ್ಲಾ ಪಾಲಿಕೆಗಳಿಗೆ ಉಚಿತ ಸ್ಪೆಷಲ್ ಇ-ಖಾತಾ ಅಭಿಯಾನ ಪ್ರಾರಂಭಿಸಲು ಸೂಚನೆ ನೀಡಲಾಗಿದೆ” ಎಂದರು.
ಕಳೆದ 50 ವರ್ಷಗಳಲ್ಲಿ ಆಸ್ತಿ ದಾಖಲೆಗಳ ಡಿಜಿಟಲೀಕರಣ ಮುನ್ನೆಲೆಗೆ ಬಂದಿರಲಿಲ್ಲ ಎಂದು ಉಲ್ಲೇಖಿಸಿದ ಅವರು, ಈಗ ಎಲ್ಲಾ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇ-ಖಾತಾ ವ್ಯವಸ್ಥೆ ತರಲಾಗುತ್ತಿದೆ ಎಂದರು. ಇದರಿಂದ ತೆರಿಗೆ ಸೋರಿಕೆ ತಡೆಗಟ್ಟುವುದು ಮುಖ್ಯ ಉದ್ದೇಶವಾಗಿದೆ. ಕಾವೇರಿ ಸಾಫ್ಟ್‌ವೇರ್ ಮೂಲಕ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಪರಿಶೀಲನೆಗೆ ಅವಕಾಶ ನೀಡಲಾಗಿದ್ದು, ದಾಖಲೆಗಳನ್ನು ಆಧಾರ್‌ಗೆ ಲಿಂಕ್ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ವಿವರಿಸಿದರು.
“ಯಾರೂ ಒಂದು ರೂಪಾಯಿ ಲಂಚ ನೀಡದೆ ಇ-ಖಾತಾ ಪಡೆಯಬಹುದು. ಮನೆ ಬಾಗಿಲಿಗೆ ಖಾತೆ ತಲುಪಿಸುವಂತೆ ಸೂಚಿಸಲಾಗಿದೆ. ಇದು ನನ್ನ ಜೀವನದಲ್ಲಿ ದೊಡ್ಡ ಸಮಾಧಾನ ನೀಡಿದ ತೀರ್ಮಾನ. ಎಷ್ಟೋ ಜನರಿಗೆ ತಮ್ಮ ಆಸ್ತಿ ಯಾರ ಹೆಸರಿನಲ್ಲಿ ಇದೆ ಎಂದು ಗೊತ್ತಿರಲಿಲ್ಲ. ಕೇಂದ್ರ ಸರ್ಕಾರವೂ ನಮ್ಮ ಅಧಿಕಾರಿಗಳಿಗೆ ಪ್ರಶಂಸಾ ಪತ್ರ ನೀಡಿದೆ” ಎಂದು ಹೇಳಿದರು.
ಬಿ ಖಾತೆಯಿಂದ ಎ ಖಾತೆಗೆ 15 ದಿನದಲ್ಲಿ ವರ್ಗಾವಣೆ
ಯೂನಿಫಾರ್ಮ್ ಲ್ಯಾಂಡ್ ರೆಕಾರ್ಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಮೂಲಕ ಬಿ ಖಾತೆಯನ್ನು ಎ ಖಾತೆಗೆ ಪರಿವರ್ತಿಸುವ ಯೋಜನೆ ಜಾರಿಯಲ್ಲಿದೆ. ಈಗಾಗಲೇ 7 ಸಾವಿರ ಅರ್ಜಿಗಳು ಬಂದಿವೆ. ಅರ್ಜಿ ಹಾಕಿರುವವರಿಗೆ 15 ದಿನದಲ್ಲಿ ವರ್ಗಾವಣೆ ಮಾಡಲು ನಿಗದಿಪಡಿಸಲಾಗಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದರು.
ಸೇಲ್ ಡೀಡ್ ಇಟ್ಟುಕೊಂಡು ಖಾತೆ ಇಲ್ಲದ 1.20 ಲಕ್ಷ ಜನರು ಅರ್ಜಿ ಸಲ್ಲಿಸಿದ್ದು, 60 ಸಾವಿರ ಅರ್ಜಿಗಳು ಒಪ್ಪಿಗೆ ಪಡೆದಿವೆ. ರದ್ದಾದ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ನಂಬಿಕೆ ನಕ್ಷೆ ಯೋಜನೆಯಲ್ಲಿ 12 ಸಾವಿರ ನಕ್ಷೆಗಳ ಹಂಚಿಕೆ
ನಂಬಿಕೆ ನಕ್ಷೆ ಯೋಜನೆಯಡಿ 12 ಸಾವಿರ ನಕ್ಷೆಗಳನ್ನು ಹಂಚಲಾಗಿದ್ದು, ಇದರಿಂದ ಭ್ರಷ್ಟಾಚಾರ ಕಡಿಮೆಯಾಗಿ ಕೆಲಸದ ವೇಗ ಹೆಚ್ಚಿದೆ. ಓಟಿಎಸ್ ಯೋಜನೆಯಲ್ಲಿ ದಂಡ-ಬಡ್ಡಿ ರದ್ದುಪಡಿಸಿ 2 ಲಕ್ಷ ಜನರಿಗೆ ಅನುಕೂಲವಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ 1,200 ಕೋಟಿ ಹಣ ಸಂಗ್ರಹವಾಗಿದೆ ಎಂದರು.
ಪ್ರಿಮೀಯಂ ಎಫ್‌ಎಆರ್ ಯೋಜನೆಯಿಂದ 1 ಸಾವಿರ ಕೋಟಿ ಆದಾಯ ನಿರೀಕ್ಷೆಯಿದೆ. ಬಿ ಸ್ಮೈಲ್ ಯೋಜನೆಯಡಿ 1.47 ಲಕ್ಷ ಕೋಟಿ ಹೂಡಿಕೆ ಆಗಿದೆ. ವೈಟ್ ಟಾಪಿಂಗ್ ಕಾಮಗಾರಿ 1,700 ಕೋಟಿ ವೆಚ್ಚದಲ್ಲಿ 150 ಕಿ.ಮೀ.ಗೆ ಮುಗಿಯುವ ಹಂತಕ್ಕೆ ಬಂದಿದ್ದು, ಎರಡನೇ ಹಂತದಲ್ಲಿ 7,500 ಕೋಟಿ ವೆಚ್ಚದ ಯೋಜನೆ ಶೀಘ್ರ ಪ್ರಾರಂಭವಾಗಲಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಕಾವೇರಿ ನೀರಿನ ವಿತರಣೆ, ಬೆಂಗಳೂರು ಬಿಜಿನೆಸ್ ಕಾರಿಡಾರ್, ಡಬಲ್ ಡೆಕ್ಕರ್ ರಸ್ತೆ, ಶಿವರಾಂ ಕಾರಂತ್ ಬಡಾವಣೆಯಲ್ಲಿ 17 ಸಾವಿರ ನಿವೇಶನಗಳ ಹಂಚಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು.
ಜಿಬಿಎ ಪಾಲಿಕೆಗಳ ಚುನಾವಣೆಗೆ ಸಿದ್ಧತೆ ನಡೆಯುತ್ತಿದ್ದು, 54 ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ನೀಡಿರುವುದನ್ನು ಸಮರ್ಥಿಸಿಕೊಂಡರು.












