ಬೆಂಗಳೂರು: ಮಕ್ಕಳ ಆರೋಗ್ಯ ಸಂರಕ್ಷಣೆಗಾಗಿ “ಜಂತುಹುಳು ಮುಕ್ತ ಮಕ್ಕಳು ಆರೋಗ್ಯವಂತ ಮಕ್ಕಳು” ಎಂಬ ಘೋಷವಾಕ್ಯದೊಂದಿಗೆ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಫೆಬ್ರವರಿ 10 ರಂದು ಅಭಿಯಾನ ಆರಂಭವಾಗಿದೆ.
ಈ ಕಾರ್ಯಕ್ರಮದಡಿಯಲ್ಲಿ 1 ರಿಂದ 19 ವರ್ಷ ವಯಸ್ಸಿನ ಎಲ್ಲಾ ಮಕ್ಕಳು ಹಾಗೂ ಹದಿಹರೆಯದವರಿಗೆ ಉಚಿತವಾಗಿ ಅಲ್ಬೆಂಡಜೋಲ್ (ಅಫ್ರೆಂಡಜೋಲ್/ಅಲೈಂಡಜೋಲ್) ಜಂತುಹುಳು ನಾಶಕ ಮಾತ್ರೆಗಳನ್ನು ನೀಡಲಾಗುತ್ತಿದೆ. ಫೆಬ್ರವರಿ 10 ರಂದು ಪ್ರಧಾನ ದಿನವಾಗಿ ಆಚರಿಸಲ್ಪಟ್ಟರೆ, ಫೆಬ್ರವರಿ 17 ರಂದು ಮಾಪ್-ಅಪ್ ದಿನವಾಗಿ ನಿಗದಿಪಡಿಸಲಾಗಿದೆ. ಮುಖ್ಯ ದಿನದಂದು ಮಾತ್ರೆ ಪಡೆಯದ ಮಕ್ಕಳಿಗೆ ಮಾಪ್-ಅಪ್ ದಿನದಂದು ಕಡ್ಡಾಯವಾಗಿ ಮಾತ್ರೆ ನೀಡಲು ಆದೇಶಿಸಲಾಗಿದೆ.

ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ 369 ವಾರ್ಡ್‌ಗಳಲ್ಲಿ ಈ ಅಭಿಯಾನವನ್ನು ವ್ಯಾಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಒಟ್ಟು 31,66,641 ಮಕ್ಕಳಿಗೆ ಮಾತ್ರೆಗಳನ್ನು ನೀಡುವ ಗುರಿ ಹೊಂದಲಾಗಿದೆ. ಫೆಬ್ರವರಿ 10 ರಂದು ಇದಾಗಲೇ 24,65,446 ಮಕ್ಕಳಿಗೆ ಮಾತ್ರೆಗಳ ವಿತರಣೆ ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಾತ್ರೆಗಳನ್ನು ನಗರದ ಎಲ್ಲಾ ಸರ್ಕಾರಿ ಶಾಲೆಗಳು, ಕಾಲೇಜುಗಳು, ಅಂಗನವಾಡಿ ಕೇಂದ್ರಗಳು ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಯು.ಪಿ.ಎಚ್.ಸಿ) ಉಚಿತವಾಗಿ ವಿತರಿಸಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಜಂತುಹುಳು ಬಾಧೆಯಿಂದ ಉಂಟಾಗುವ ರಕ್ತಹೀನತೆ (ಅನಿಮಿಯಾ), ಪೌಷ್ಟಿಕತೆ ಕೊರತೆ ಮತ್ತು ಬೆಳವಣಿಗೆ ಕುಂಠಿತವನ್ನು ತಡೆಗಟ್ಟಬಹುದು ಎಂಬುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಜಂತುಹುಳು ಸೋಂಕಿನ ಸಾಮಾನ್ಯ ಲಕ್ಷಣಗಳು:
- ಹೊಟ್ಟೆ ನೋವು
- ದಣಿವು ಮತ್ತು ಆಯಾಸ
- ಹಸಿವಿಲ್ಲದಿರುವಿಕೆ
- ತೂಕ ಇಳಿಕೆ
- ಕಿರಿಕಿರಿ ಅಥವಾ ಅಸಹನೀಯತೆ
ತಡೆಗಟ್ಟುವ ಕ್ರಮಗಳು:
- ನಿಯಮಿತವಾಗಿ ಕೈಗಳನ್ನು ಸಾಬೂನಿನಿಂದ ತೊಳೆಯಿರಿ
- ಬೇಯಿಸಿದ ಆಹಾರವನ್ನು ಮಾತ್ರ ಸೇವಿಸಿ
- ಶುದ್ಧ ಕುಡಿಯುವ ನೀರನ್ನು ಬಳಸಿ
- ಪರಿಸರವನ್ನು ಸ್ವಚ್ಛವಾಗಿಡಿ
- ಹೊರಗೆ ಹೋಗುವಾಗ ಚಪ್ಪಲಿ ಅಥವಾ ಶೂ ಧರಿಸಿ
- ಬಹಿರಂಗ ಶೌಚವನ್ನು ಸಂಪೂರ್ಣ ತಪ್ಪಿಸಿ
ಮಾತ್ರೆ ಸೇವನೆಯ ಮಾರ್ಗಸೂಚಿಗಳು:
- 1-2 ವರ್ಷದ ಮಕ್ಕಳಿಗೆ: ಅರ್ಧ ಮಾತ್ರೆಯನ್ನು ಪುಡಿ ಮಾಡಿ ನೀರಿನೊಂದಿಗೆ ನೀಡಿ
- 2-3 ವರ್ಷದ ಮಕ್ಕಳಿಗೆ: ಒಂದು ಪೂರ್ತಿ ಮಾತ್ರೆಯನ್ನು ಪುಡಿ ಮಾಡಿ ನೀರಿನೊಂದಿಗೆ ನೀಡಿ
- 3-19 ವರ್ಷದ ಮಕ್ಕಳಿಗೆ: ಒಂದು ಪೂರ್ತಿ ಮಾತ್ರೆಯನ್ನು ಚೀಪಿ ಬಿಗಿದು ಅಥವಾ ಅಗಿದು ನೀರಿನೊಂದಿಗೆ ಸೇವಿಸಿ
ಪೋಷಕರು, ಶಿಕ್ಷಕರು ಮತ್ತು ಪಾಲಕರು ತಮ್ಮ ಮಕ್ಕಳು ನಿಗದಿತ ದಿನಗಳಲ್ಲಿ ಮಾತ್ರೆ ಸೇವಿಸುವಂತೆ ಖಚಿತಪಡಿಸಿಕೊಳ್ಳಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಡಾ. ಕಲಾವತಿ ಅವರನ್ನು 9620413060 ಸಂಖ್ಯೆಗೆ ಸಂಪರ್ಕಿಸಬಹುದು.
ಈ ಅಭಿಯಾನದ ಮೂಲಕ ಬೆಂಗಳೂರಿನ ಮಕ್ಕಳ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಒತ್ತಾಯಿಸಲಾಗಿದೆ.












