ರೈತರ ಫಲವತ್ತಾದ ಜಮೀನು ಲಪಟಾಯಿಸಿ ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದೆ ಸರ್ಕಾರ: ಸಿದ್ದರಾಮಯ್ಯ ಅವರೇ ಬ್ರೋಕರ್ ಎಂದು ಆರೋಪ
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡು ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿರುವುದಾಗಿ ರಾಜ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, “ರೈತರು ಜಮೀನು ನೀಡುವುದಿಲ್ಲ ಎಂದು ಬೀದಿಯಲ್ಲಿ ಕುಳಿತಿದ್ದಾರೆ. ಆದರೆ ಸರ್ಕಾರದಲ್ಲಿರುವ ರಿಯಲ್ ಎಸ್ಟೇಟ್ ದಂಧೆಕೋರರು ಭೂಮಿ ಕಿತ್ತುಕೊಂಡು ವ್ಯವಹಾರ ಮಾಡಲು ಹೊರಟಿದ್ದಾರೆ. ಇದು ಯಾರಪ್ಪ ಭೂಮಿ? ಧಮ್ಕಿ ಹಾಕಿ ಕಿತ್ತುಕೊಳ್ಳುವುದಕ್ಕೆ?” ಎಂದು ಕಿಡಿಕಾರಿದರು.
“ಸಿದ್ದರಾಮಯ್ಯ ಅವರೇ ರಿಯಲ್ ಎಸ್ಟೇಟ್ ಬ್ರೋಕರ್”
ರಾಜ್ಯ ಸರ್ಕಾರವನ್ನು ‘ರಿಯಲ್ ಎಸ್ಟೇಟ್ ಸರ್ಕಾರ’ ಎಂದು ಕರೆದ ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೇರವಾಗಿ ಟೀಕಿಸಿದರು. “ಜನರ ಆಡಳಿತ ನಡೆಸಬೇಕಾದ ಸರ್ಕಾರ ಬ್ರೋಕರ್ ಕೆಲಸ ಮಾಡುತ್ತಿದೆ. ಬಡ ರೈತರಿಂದ ಜಮೀನು ಕಿತ್ತುಕೊಂಡು ರಿಯಲ್ ಎಸ್ಟೇಟ್ ಮಾಫಿಯಾ ನಡೆಸುತ್ತಿದೆ. ಇದರ ಬ್ರೋಕರ್ ಗಿರಿಯನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಹಿಸಿಕೊಂಡಿದ್ದಾರೆ,” ಎಂದು ಆರೋಪಿಸಿದರು.
ಎಂಟು ಹಳ್ಳಿಗಳ ರೈತರ ಅತ್ಯಂತ ಫಲವತ್ತಾದ ತೋಟಗಾರಿಕೆ ಭೂಮಿಯನ್ನು ತೆಗೆದುಕೊಂಡು ಟೌನ್‌ಶಿಪ್ ನಿರ್ಮಿಸುವ ಯೋಜನೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿದ ಅವರು, “ಭೂಮಿ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಯಾವ ರೈತರೂ ಭೂಮಿ ಬಿಡುವುದಿಲ್ಲ. ಬಲವಂತವಾಗಿ ತೆಗೆದುಕೊಳ್ಳಲು ಬನ್ನಿ, ನೋಡೋಣ,” ಎಂದು ಸವಾಲು ಹಾಕಿದರು.

ರಾಮನಗರ ಜಿಲ್ಲಾಧಿಕಾರಿಗೆ ನೇರ ಎಚ್ಚರಿಕೆ
ರಾಮನಗರ ಜಿಲ್ಲಾಧಿಕಾರಿಯನ್ನು ತೀವ್ರವಾಗಿ ಟೀಕಿಸಿದ ಕುಮಾರಸ್ವಾಮಿ, “ರೈತರ ಭೂಮಿ ಕಿತ್ತುಕೊಳ್ಳುವ ದಂಧೆಕೋರರ ಮಾತಿಗೆ ಈ ಡಿಸಿ ಕುಣಿಯುತ್ತಿದ್ದಾರೆ. ನನ್ನ ಫೋನ್ ನಂಬರ್ ನೋಡಿದರೆ ಕಾಲೇ ಪಿಕ್ ಮಾಡುವುದಿಲ್ಲ. ರೈತರ ಕಷ್ಟಸುಖಗಳನ್ನು ತಿಳಿಯಲು ಒಂದು ಗ್ರಾಮಕ್ಕೂ ಹೋಗಿಲ್ಲ. ಸಮಯ ಬಂದಾಗ ಉತ್ತರ ಕೊಡುತ್ತೇನೆ,” ಎಂದು ಎಚ್ಚರಿಸಿದರು.
ಸತ್ಯಶೋಧನಾ ಸಮಿತಿ ವರದಿ ಎಲ್ಲಿ?
ತಾವು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಸರ್ಕಾರವು ಬೆಂಗಳೂರಿನ ಒತ್ತಡ ಕಡಿಮೆಗೊಳಿಸಲು ಐದು ಟೌನ್‌ಶಿಪ್ ಯೋಜನೆಗಳನ್ನು ಘೋಷಿಸಿದ್ದನ್ನು ನೆನಪಿಸಿದ ಕುಮಾರಸ್ವಾಮಿ, ಆಗ ಕಾಂಗ್ರೆಸ್ ನೇತೃತ್ವದಲ್ಲಿ ರಚಿಸಲಾದ ಸತ್ಯಶೋಧನಾ ಸಮಿತಿಯ ವರದಿ ಏನಾಯಿತು ಎಂದು ಪ್ರಶ್ನಿಸಿದರು. “ಆ ಸಮಿತಿಯ ನೇತೃತ್ವ ವಹಿಸಿದ್ದ ಹೆಚ್.ಕೆ. ಪಾಟೀಲ್ ಅವರೇ ಈಗ ಕಾನೂನು ಸಚಿವರಾಗಿದ್ದಾರೆ. ಆ ವರದಿ ಎಲ್ಲಿ? ಕಸದ ಬುಟ್ಟಿಗೆ ಹಾಕಿದ್ದೀರಾ?” ಎಂದು ಪ್ರಶ್ನೆ ಮಾಡಿದರು.
ಕುರ್ಚಿ ಉಳಿಸಿಕೊಳ್ಳುವ ದಂಧೆ
ಸರ್ಕಾರ 33,000 ಕೋಟಿ ಆದಾಯ ಬರುತ್ತದೆ ಎಂದು ಹೇಳುತ್ತಿರುವುದನ್ನು ಟೀಕಿಸಿದ ಅವರು, “ಇದು ರೈತರನ್ನು ಉಳಿಸುವ ಯೋಜನೆಯೇ? 12,000 ಕೋಟಿ ಸಾಲ ತೆಗೆದುಕೊಳ್ಳುತ್ತಿದ್ದಾರೆ. ರೈತರೇ ಇಲ್ಲ ಎನ್ನುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ತಮ್ಮ ಡೇರಿ ಅಧ್ಯಕ್ಷರಾಗಿದ್ದಾರೆ. ಆ ಹಳ್ಳಿಗಳಲ್ಲಿ ಎಷ್ಟು ಹಾಲು ಸಂಗ್ರಹವಾಗುತ್ತಿದೆ ಎಂದು ಕೇಳಿ,” ಎಂದು ವ್ಯಂಗ್ಯವಾಡಿದರು.
ಕೊನೆಯಲ್ಲಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ ಕುಮಾರಸ್ವಾಮಿ, “ಕುರ್ಚಿ ಸಿಕ್ಕಿದರೆ ಸಾಕು ಎಂದು ದಂಧೆಕೋರರ ಮಾತು ಕೇಳಿ ರಿಯಲ್ ಎಸ್ಟೇಟ್ ದಲ್ಲಾಳಿ ಆಗಬೇಡಿ. ಕೊನೆಗಾಲದಲ್ಲಿ ಗೌರವಯುತವಾಗಿ ಒಳ್ಳೆಯ ಹೆಸರು ತೆಗೆದುಕೊಂಡು ಹೋಗಿ,” ಎಂದು ಹೇಳಿದರು.
ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ, ಟಿ.ಎ. ಜವರಾಯಗೌಡ, ಶಾಸಕಿ ಕರೆಮ್ಮ ನಾಯಕ ಸೇರಿದಂತೆ ಹಲವು ಜೆಡಿಎಸ್ ನಾಯಕರು ಮತ್ತು ಟೌನ್‌ಶಿಪ್ ಪ್ರಭಾವಿತ ರೈತ ಮುಖಂಡರು ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.












