ತಿರುಮಲ: ದೇಶವು ಆರ್ಥಿಕ ಬಿಕ್ಕಟ್ಟಿನಿಂದ ಬಳಲದಂತೆ ಆಗಲಿ, ಎಲ್ಲರಿಗೂ ಶಕ್ತಿ ಮತ್ತು ಉತ್ತಮ ಆರೋಗ್ಯ ದೊರೆಯಲಿ ಹಾಗೂ ಕರ್ನಾಟಕದಲ್ಲಿ ಉತ್ತಮ ಮಳೆ ಬರಲಿ ಎಂದು ಭಗವಂತ ಶ್ರೀ ವೆಂಕಟೇಶ್ವರನಲ್ಲಿ ಪ್ರಾರ್ಥಿಸಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ತಿರುಮಲದಲ್ಲಿ ಮಂಗಳವಾರ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ಇಡೀ ದೇಶ ಶಾಂತಿಯಿಂದ ಕೂಡಿರಲಿ. ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಲಿ ಎಂದು ಭಗವಂತನಲ್ಲಿ ಕೋರಿಕೊಂಡಿದ್ದೇನೆ” ಎಂದರು.
“ಆರೇಳು ವರ್ಷಗಳ ನಂತರ ತಿರುಮಲಕ್ಕೆ ಬಂದಿರುವುದು ನನಗೆ ಬಹಳ ಸಂತೋಷ ತಂದಿದೆ. ಈ ಮಹತ್ವದ ದಿನದಂದು ಇಲ್ಲಿ ಬಂದು ದರ್ಶನ ಪಡೆಯಲು ಸಾಧ್ಯವಾದುದು ನನ್ನ ಅದೃಷ್ಟ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ (ಟಿಟಿಡಿ) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, “ಟಿಟಿಡಿ ಬಹಳಷ್ಟು ಬದಲಾವಣೆಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಶಿಸ್ತು, ಉತ್ತಮ ಶುಚಿತ್ವ ಮತ್ತು ಸುಸಂಘಟಿತ ಆಡಳಿತವನ್ನು ಕಾಪಾಡಿಕೊಂಡು ಉತ್ತಮ ಕೆಲಸ ಮಾಡುತ್ತಿದೆ. ಟಿಟಿಡಿ ಅಧ್ಯಕ್ಷರು ಮತ್ತು ಅವರ ತಂಡ ತುಂಬಾ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿನ ಕಂದಾಯ ಸಚಿವರೂ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ನಾನು ಧನ್ಯವಾದಗಳನ್ನು ಹೇಳುತ್ತೇನೆ” ಎಂದರು.
ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನದಿಂದ ಮನಸ್ಸು ತುಂಬಾ ಸಂತಸಗೊಂಡಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.












