ಎರಡು ವರ್ಷಗಳಲ್ಲಿ 5,394 ರೈತರು ಜೀವ ಕಳೆದಿದ್ದಾರೆ; ಅನ್ನದಾತರ ಸಮಾಧಿಯ ಮೇಲೆ ಸಮರ್ಪಣಾ ಸಮಾವೇಶ!
ಬೆಂಗಳೂರು: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕ ಮುಚ್ಚಿಟ್ಟಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಆರೋಪ ಮಾಡಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, “ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ‘ಅನ್ನದಾತರ ಆತ್ಮಹತ್ಯೆ ಹೆಚ್ಚಳ’ ಎಂಬ ವರದಿ ಓದಿ ತೀವ್ರ ಆಘಾತವಾಗಿದೆ. ಈ ವರದಿ ಪ್ರಕಟವಾಗಿ ಹನ್ನೆರಡು ದಿನಗಳು ಕಳೆದರೂ ಸರ್ಕಾರ ಕಣ್ಣು ತೆರೆಯುತ್ತಿಲ್ಲ. ಬದಲಿಗೆ ಸಾಧನಾ ಸಮಾವೇಶಗಳಲ್ಲಿ ಸಂಭ್ರಮಿಸುತ್ತಿದೆ” ಎಂದು ಕಿಡಿಕಾರಿದರು.
NCRB ದತ್ತಾಂಶ ಬಹಿರಂಗ
ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ (NCRB) ವರದಿಯ ಪ್ರಕಾರ, 2023ರಲ್ಲಿ 2,423 ರೈತರು ಹಾಗೂ 2024ರಲ್ಲಿ 2,971 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ವರ್ಷಗಳಲ್ಲಿ ಒಟ್ಟು 5,394 ರೈತರು ಜೀವ ಕಳೆದಿದ್ದಾರೆ. ಮಹಾರಾಷ್ಟ್ರದ ನಂತರ ಕರ್ನಾಟಕ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.
“ಈ ಅಂಕಿ-ಅಂಶಗಳು ಸರ್ಕಾರಕ್ಕೆ ತಿಳಿದಿಲ್ಲವೇ? ಅಥವಾ ತಿಳಿದೂ ಮುಚ್ಚಿಡುತ್ತಿದೆಯೇ?” ಎಂದು ಪ್ರಶ್ನಿಸಿದ ಕುಮಾರಸ್ವಾಮಿ, “ಇಷ್ಟು ದೊಡ್ಡ ಸಂಖ್ಯೆಯ ರೈತರ ಆತ್ಮಹತ್ಯೆಗಳನ್ನು ಜಾಣ್ಮೆಯಿಂದ ಮುಚ್ಚಿಟ್ಟು, ಅನ್ನದಾತರ ಸಮಾಧಿಯ ಮೇಲೆ ಸಮರ್ಪಣಾ ಸಮಾವೇಶ ನಡೆಸುತ್ತಿದೆ ಈ ಸರ್ಕಾರ” ಎಂದು ತಿಕ್ಷ್ಣವಾಗಿ ಟೀಕಿಸಿದರು.
ಗ್ಯಾರಂಟಿ vs ರೈತರ ಆತ್ಮಹತ್ಯೆ
“ಒಂದೆಡೆ ರೈತರು ನಿತ್ಯ ಸಾಯುತ್ತಿದ್ದಾರೆ, ಇನ್ನೊಂದೆಡೆ ಗ್ಯಾರಂಟಿ ಹೆಸರಿನಲ್ಲಿ ಹಬ್ಬ ಮಾಡುತ್ತಿದ್ದಾರೆ. ಗ್ಯಾರಂಟಿಗಳು ಉತ್ತಮವಾಗಿದ್ದರೆ ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ?” ಎಂದು ಪ್ರಶ್ನಿಸಿದ ಅವರು, ಸರ್ಕಾರವು ರೈತರ ಜೀವನದ ಮೇಲೆ ಸಮಾಧಿ ಕಟ್ಟಿ ವೈಭವ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.
ಕಂದಾಯ ಇಲಾಖೆಯಲ್ಲಿ ರೈತರಿಗೆ ಅನೇಕ ಸಮಸ್ಯೆಗಳಿವೆ ಎಂದು ತಿಳಿಸಿದ ಕುಮಾರಸ್ವಾಮಿ, “ಭೂ ಗ್ಯಾರಂಟಿ ಎಂದು ಪುಕ್ಕಟೆ ಪ್ರಚಾರ ಮಾಡುತ್ತಿದ್ದಾರೆ. ಆದರೆ ರೈತರ ಆತ್ಮಹತ್ಯೆಗಳು ಈ ಸರ್ಕಾರದ ವೈಫಲ್ಯವನ್ನು ಸಾರಿ ಹೇಳುತ್ತಿವೆ” ಎಂದರು.
ಬಿಡದಿ ಟೌನ್‌ಶಿಪ್ ವಿಚಾರ
ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಉಪ ಮುಖ್ಯಮಂತ್ರಿ ನೀಡಿದ ಸವಾಲನ್ನು ಸ್ವೀಕರಿಸಿದ ಕುಮಾರಸ್ವಾಮಿ, “ಚರ್ಚೆಗೆ ಸಿದ್ಧರಿದ್ದೇನೆ. ಎಲ್ಲಿಗೆ ಬೇಕಾದರೂ ಬನ್ನಿ. ಮೂರುವರೆ ಸಾವಿರಕ್ಕೂ ಹೆಚ್ಚು ರೈತರು ಅರ್ಜಿ ಕೊಟ್ಟು ವಿರೋಧ ವ್ಯಕ್ತಪಡಿಸಿದ್ದಾರೆ. ರೌಡಿಗಳು ಮತ್ತು ಪೊಲೀಸರ ಮೂಲಕ ಬೆದರಿಸುತ್ತಿದ್ದಾರೆ. ಯೋಜನೆಯಿಂದ ಒಳ್ಳೆಯದಾಗುವುದಿದ್ದರೆ ರೈತರು ಸ್ವಯಂ ಭೂಮಿ ನೀಡುತ್ತಿದ್ದರು” ಎಂದು ಹೇಳಿದರು.
ಅಖಂಡ ಶ್ರೀನಿವಾಸ ಮೂರ್ತಿ ಜೆಡಿಎಸ್ ಸೇರ್ಪಡೆ
ಎರಡು ಬಾರಿ ಶಾಸಕರಾಗಿ ಗೆದ್ದ ಅಖಂಡ ಶ್ರೀನಿವಾಸ ಮೂರ್ತಿ ಅವರು ಜೆಡಿಎಸ್ ಪಕ್ಷ ಸೇರಲು ಉತ್ಸುಕರಾಗಿದ್ದಾರೆ ಎಂದು ಕುಮಾರಸ್ವಾಮಿ ಘೋಷಿಸಿದರು. ಮಂಗಳವಾರ ಬೆಳಗ್ಗೆ ಅವರ ಮನೆಗೆ ಭೇಟಿ ನೀಡಿದ್ದ ಕುಮಾರಸ್ವಾಮಿ, “ಸದ್ಯದಲ್ಲೇ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ” ಎಂದರು.
ಈ ಸಂದರ್ಭದಲ್ಲಿ ಕೋಲಾರ ಲೋಕಸಭಾ ಸಂಸದ ಮಲ್ಲೇಶ್ ಬಾಬು, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ. ರಮೇಶ ಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ ತೂಪಲ್ಲಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.












