ಕೊಪ್ಪಳ: ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಜೆಡಿಎಸ್-ಬಿಜೆಪಿ ಅಡ್ಡಮತದಾನದ ಬಗ್ಗೆ ಪ್ರತಿಕ್ರಿಯಿಸುತ್ತಾ, “ನಾನು ಹೇಳುವುದಕ್ಕಿಂತ ನೀವೇ ಹೆಚ್ಚು ತೋರಿಸಿದ್ದೀರಿ. ಅವರವರ ಪಕ್ಷದ ಶಾಸಕರನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವಲ್ಲಿ ವಿಫಲವಾಗಿದ್ದಾರೆ” ಎಂದು ಹೇಳಿದ್ದಾರೆ.
ಅವರು ಮುಂದುವರೆದು, “ನಮ್ಮ ಪಕ್ಷದ ಗ್ಯಾರೆಂಟಿ ಯೋಜನೆಗಳು ಜನರನ್ನು ಆಕರ್ಷಿಸಿವೆ. ಇದರಿಂದ ದೂರದೃಷ್ಟಿ ಸಮಾಜದಲ್ಲಿ ಬಂದಿದೆ. ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಜನರು ಮೆಚ್ಚುತ್ತಿದ್ದಾರೆ. ಅಡ್ಡಮತದಾನವು ಎರಡು ಪಕ್ಷಗಳ ವೀಕ್‌ನೆಸ್ ತೋರಿಸುತ್ತದೆ. ಅವರಲ್ಲಿಯೇ ಹೊಂದಾಣಿಕೆ ಇಲ್ಲ ಎಂದು ಎತ್ತಿತೋರಿಸುತ್ತದೆ” ಎಂದರು.
ಬಿಎಲ್ ಪಿ ಸಭೆ ಬಗ್ಗೆ ಮಾತನಾಡುತ್ತಾ, “ನೆಕ್ಸ್ಟ್ ಬಿಎಲ್ ಪಿ ಸಭೆ ಧರ್ಮಸ್ಥಳದಲ್ಲಿ ನಡೆಯುತ್ತದೆ ಎಂದು ಟಿವಿಯಲ್ಲಿ ನೋಡಿದ್ದೇನೆ. ನಮ್ಮದು ಸಿಎಲ್ ಪಿ, ಅವರದು ಬಿಎಲ್ ಪಿ. ಧರ್ಮಸ್ಥಳದಲ್ಲಿ ಬಿಎಲ್ ಪಿ ಮಾಡುತ್ತಿದ್ದಾರೆ ಎಂದು ಕೇಳಿದ್ದೇನೆ. ಅವರಲ್ಲಿಯೇ ಅವರಿಗೆ ವಿಶ್ವಾಸವಿಲ್ಲ” ಎಂದು ಶಾಸಕರು ಟೀಕಿಸಿದರು.
ಗ್ಯಾರೆಂಟಿಗಳು ನಿಲ್ಲುವುದಿಲ್ಲ
ಗ್ಯಾರೆಂಟಿ ಯೋಜನೆಗಳು ನಿಲ್ಲುತ್ತವೆ ಎಂಬ ಚರ್ಚೆಗೆ ಪ್ರತಿಕ್ರಿಯಿಸಿದ ಶಾಸಕ ರಾಘವೇಂದ್ರ ಹಿಟ್ನಾಳ್, “ಯಾವುದೇ ಕಾರಣಕ್ಕೂ ಗ್ಯಾರೆಂಟಿಗಳು ನಿಲ್ಲುವುದಿಲ್ಲ. ನಮ್ಮ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಮೊನ್ನೆ ಹೇಳಿದ್ದಾರೆ. ಕೆಲವು ಟೆಕ್ನಿಕಲ್ ಪ್ರಾಬ್ಲಮ್‌ಗಳಿವೆ, ಹಾಗಾಗಿ ಸಮಸ್ಯೆ ಆಗಿದೆ. ಆದರೆ ಯಾವುದೇ ಕಾರಣಕ್ಕೂ ಗ್ಯಾರೆಂಟಿ ನಿಲ್ಲುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
“ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತಕ್ಕೆ ಬರುವುದು ನಿಶ್ಚಿತ” ಎಂದು ವಿಶ್ವಾಸ ವ್ಯಕ್ತಪಡಿಸಿದ ಶಾಸಕ ರಾಘವೇಂದ್ರ ಹಿಟ್ನಾಳ್, ಕಾಂಗ್ರೆಸ್ ಸರ್ಕಾರದ ಯೋಜನೆಗಳು ಜನರ ಮನಸ್ಸು ಗೆದ್ದಿರುವುದನ್ನು ಒತ್ತಿ ಹೇಳಿದರು.










