ಕಲ್ಬುರ್ಗಿ: ಬಿಡದಿ ಟೌನ್‍ಶಿಪ್ ಯೋಜನೆಗಾಗಿ ರೈತರ ಜಮೀನು ಕಸಿದುಕೊಳ್ಳುವ ಪ್ರಯತ್ನವನ್ನು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತೀವ್ರವಾಗಿ ಖಂಡಿಸಿದ್ದಾರೆ. ರೈತರನ್ನು ಬೀದಿಗೆ ತಂದು ಜಮೀನು ಆಕ್ರಮಿಸುವ ‘ಭ್ರಮೆ’ಯಿಂದ ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇಂದು ಕಲ್ಬುರ್ಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಜಯೇಂದ್ರ, “ಕಪಟ ನಾಟಕ ಬದಿಗಿಟ್ಟು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಅಭಿವೃದ್ಧಿ ಬಗ್ಗೆ ಗಮನ ಹರಿಸಿ. ಬೆಂಗಳೂರಿನ ಅಭಿವೃದ್ಧಿಯೇ ರಾಜ್ಯದ ಅಭಿವೃದ್ಧಿ ಎಂಬ ಭ್ರಮೆಯಿಂದ ಕಾಂಗ್ರೆಸ್ ಸರಕಾರ ಹೊರಬರಲಿ” ಎಂದು ಒತ್ತಾಯಿಸಿದರು.
ರೈತರ ಜಮೀನು ಕಸಿದು ಟೌನ್‍ಶಿಪ್ ಸಾಧ್ಯವಿಲ್ಲ
ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಮುಖ್ಯಮಂತ್ರಿಗಳ ಕರ್ತವ್ಯವಾಗಿದೆ ಎಂದು ಹೇಳಿದ ವಿಜಯೇಂದ್ರ, “ದಬ್ಬಾಳಿಕೆ ಮಾಡಲು ನೀವು ಮುಖ್ಯಮಂತ್ರಿಗಳಾಗಿಲ್ಲ. ಟೌನ್‍ಶಿಪ್ ಅಗತ್ಯವಿದೆ, ಆದರೆ ರೈತರ ಜಮೀನು ಕಸಿದುಕೊಂಡು ಮಾಡುವುದು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಬಿಡದಿ ಟೌನ್‍ಶಿಪ್ ಮತ್ತು ಕನಕಪುರ ವಿಮಾನ ನಿಲ್ದಾಣ ಯೋಜನೆಗಳನ್ನು ಉಲ್ಲೇಖಿಸಿದ ಅವರು, “ಡಿ.ಕೆ. ಶಿವಕುಮಾರ್ ಅವರ ಸಾವಿರಾರು ಎಕರೆ ಜಮೀನು ಅಲ್ಲಿದೆ ಎಂದು ಜನರು ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ರಿಯಲ್ ಎಸ್ಟೇಟ್ ಬಗ್ಗೆ ಆಸಕ್ತಿ ಹೆಚ್ಚಿದೆಯೇ? ರೈತರ ಬಗ್ಗೆ ಕಾಳಜಿ ಇದ್ದರೆ ಈ ಪರಿಸ್ಥಿತಿ ಬರಲಿರಲಿಲ್ಲ” ಎಂದು ಟೀಕಿಸಿದರು.
ಸಿಎಂಗೆ ಪತ್ರ ಬರೆಯುವುದಾಗಿ ಘೋಷಣೆ
ಮುಖ್ಯಮಂತ್ರಿಗಳ ಆದ್ಯತೆ ರಿಯಲ್ ಎಸ್ಟೇಟ್‌ನದ್ದೋ ಅಥವಾ ರೈತರದ್ದೋ ಎಂದು ಸ್ಪಷ್ಟಪಡಿಸುವಂತೆ ವಿಜಯೇಂದ್ರ ಆಗ್ರಹಿಸಿದರು. “ಬೆಂಗಳೂರು ಅಭಿವೃದ್ಧಿ ಆಗಬೇಕು, ಯುವಕರಿಗೆ ಉದ್ಯೋಗ ಸಿಗಬೇಕು ಎನ್ನುವುದನ್ನು ನಾನು ವಿರೋಧಿಸುವುದಿಲ್ಲ. ಆದರೆ ರೈತರ ಮೇಲೆ ದಬ್ಬಾಳಿಕೆ ಮಾಡಿ, ಗೂಂಡಾಗಳನ್ನು ಬಿಟ್ಟು ಬೆದರಿಸುವುದು ಸರಿಯಲ್ಲ. ಶೇ.70 ರೈತರು ಸಮ್ಮತಿ ನೀಡಿದಲ್ಲಿ ಮಾತ್ರ ಭೂಸ್ವಾಧೀನ ಮಾಡಬೇಕು” ಎಂದು ಹೇಳಿದರು.
ಬಿಜೆಪಿ ರೈತರ ಪರವಾಗಿ ಗಂಭೀರವಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿದ ಅವರು, ಮುಖ್ಯಮಂತ್ರಿಗಳಿಗೆ ಶೀಘ್ರವೇ ಪತ್ರ ಬರೆಯುವುದಾಗಿ ತಿಳಿಸಿದರು.
ಗೃಹ ಸಚಿವರಿಗೆ ಕಿಡಿ
ಕಲ್ಬುರ್ಗಿ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ತಪ್ಪಿಸಿಕೊಂಡ ಘಟನೆಯ ಕುರಿತು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ವಿಜಯೇಂದ್ರ, “ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಮೆರಿಕ-ಇರಾನ್ ಯುದ್ಧದ ವಿಚಾರದಲ್ಲಿ ಬ್ಯುಸಿ ಇದ್ದಾರೆ. ಆದಷ್ಟು ಬೇಗ ಅದನ್ನು ಇತ್ಯರ್ಥಪಡಿಸಿ ತಮ್ಮ ಜಿಲ್ಲೆ ಮತ್ತು ಇಲಾಖೆ ಬಗ್ಗೆ ಗಮನ ಹರಿಸಲಿ” ಎಂದು ವ್ಯಂಗ್ಯವಾಡಿದರು.











