ಬೆಂಗಳೂರು : ರಾಜ್ಯದ ಎಲ್ಲಾ ನಗರ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕ ವಿಧಾನದಲ್ಲಿ ಕೈಗೊಳ್ಳಲು ದಾವಣಗೆರೆ ಮಾದರಿಯನ್ನು ಅನುಸರಿಸಿ, ಮನೆಮನೆಗಳಲ್ಲೇ 100% ಹಸಿ ಮತ್ತು ಒಣ ಕಸ ವಿಂಗಡಣೆಯನ್ನು ಕಡ್ಡಾಯಗೊಳಿಸುವಂತೆ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.
ಇಂದು ಸಚಿವರ ಗೃಹ ಕಚೇರಿ ‘ಕಾವೇರಿ’ಯಲ್ಲಿ ಸ್ವಚ್ಛ ಭಾರತ ಮಿಷನ್ 2.0 (SBM 2.0) ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ದಾವಣಗೆರೆ ನಗರದಲ್ಲಿ 100% ಕಸ ವಿಂಗಡಣೆ ಯಶಸ್ವಿಯಾಗಿ ನಡೆಯುತ್ತಿದೆ. ಸಾರ್ವಜನಿಕರು ಮನೆಗಳಲ್ಲೇ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುತ್ತಿದ್ದಾರೆ. ದಾವಣಗೆರೆಯಲ್ಲಿ ಸಾಧ್ಯವಾದರೆ ರಾಜ್ಯದ ಇತರ ನಗರಗಳಲ್ಲಿ ಏಕೆ ಸಾಧ್ಯವಿಲ್ಲ? ಪ್ರತಿಯೊಂದು ನಗರದಲ್ಲೂ ಈ ಮಾದರಿಯನ್ನು ತಕ್ಷಣ ಜಾರಿಗೆ ತರಬೇಕು” ಎಂದು ಒತ್ತಾಯಿಸಿದರು.

ಸಚಿವರು ಹಳೆಯ ‘ಲೆಗಸಿ ವೇಸ್ಟ್’ ವಿಲೇವಾರಿಗೆ ವೇಗ ನೀಡುವಂತೆಯೂ, ಹೊಸದಾಗಿ ಸಂಗ್ರಹವಾಗುವ ಕಸವು ವಿಂಗಡಣೆಯಾಗದೆ ರಾಶಿಯಾಗದಂತೆ ತಡೆಯುವಂತೆಯೂ ಸೂಚಿಸಿದರು. “ಮೂಲದಲ್ಲೇ 100% ವಿಂಗಡಣೆ ಮತ್ತು ಸಂಸ್ಕರಣಾ ಸಾಮರ್ಥ್ಯವನ್ನು ತುರ್ತಾಗಿ ಹೆಚ್ಚಿಸಬೇಕು” ಎಂದು ಅವರು ಹೇಳಿದರು.
ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ (Waste-to-Energy) ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದ ಸಚಿವರು, ಬಿದದಿಯಲ್ಲಿ ಯಶಸ್ವಿಯಾಗುತ್ತಿರುವ ಮಾದರಿಯಲ್ಲಿ ಇತರ ದೊಡ್ಡ ನಗರಗಳಿಗೂ ವಿಸ್ತರಿಸುವ ನಿಟ್ಟಿನಲ್ಲಿ ಆಲೋಚಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

SBM 2.0 ಪ್ರಗತಿ ವಿವರ
ಸಭೆಯಲ್ಲಿ ಸ್ವಚ್ಛ ಭಾರತ್ ಮಿಷನ್ ರಾಜ್ಯ ಅಭಿಯಾನ ನಿರ್ದೇಶಕ ಡಾ. ಆರ್. ಸೆಲ್ವಮಣಿ ಅವರು ಯೋಜನೆಗಳ ಪ್ರಗತಿ ವಿವರಿಸಿದರು. ರಾಜ್ಯದ 13 ಮಹಾನಗರ ಪಾಲಿಕೆಗಳು ODF (Open Defecation Free) ಸಾಧಿಸಿವೆ ಎಂದು ತಿಳಿಸಿದ ಅವರು, ಬಿಟ್ಟುಹೋದ ಫಲಾನುಭವಿಗಳಿಗೆ ಮಂಜೂರಾದ 900ಕ್ಕೂ ಹೆಚ್ಚು ಗೃಹ ಶೌಚಾಲಯಗಳಲ್ಲಿ 391 ಕಾಮಗಾರಿ ಪೂರ್ಣಗೊಂಡಿವೆ ಎಂದರು. ಕಲಬುರಗಿ ಮತ್ತು ತುಮಕೂರು ಪಾಲಿಕೆಗಳಲ್ಲಿ ಬಾಕಿ ಕಾಮಗಾರಿಗಳನ್ನು ವೇಗಗೊಳಿಸುವಂತೆ ಸೂಚಿಸಲಾಗಿದೆ.
ಇದರ ಜೊತೆಗೆ 230 ಸಾರ್ವಜನಿಕ ಮತ್ತು 242 ಸಮುದಾಯ ಶೌಚಾಲಯಗಳ ನಿರ್ಮಾಣ ಅಂತಿಮ ಹಂತದಲ್ಲಿದೆ. 13 ಮಹಾನಗರ ಪಾಲಿಕೆಗಳಿಗೆ ₹148 ಕೋಟಿ ವೆಚ್ಚದ ಆಕ್ಷನ್ ಪ್ಲಾನ್ ಅನುಮೋದನೆಯಾಗಿದ್ದು, ₹34 ಕೋಟಿ ಮೌಲ್ಯದ ಕಾಮಗಾರಿಗಳು ಪೂರ್ಣಗೊಂಡಿವೆ. ರಾಯಚೂರು, ಬೀದರ್, ತುಮಕೂರು ಮತ್ತು ವಿಜಯಪುರ ನಗರಗಳಲ್ಲಿ ಲೆಗಸಿ ವೇಸ್ಟ್ ಸಂಪೂರ್ಣ ವಿಲೇವಾರಿಯಾಗಿದೆ ಎಂದು ಅವರು ತಿಳಿಸಿದರು.
ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಬಿ.ಬಿ. ಕಾವೇರಿ ಅವರು, ಘನ ತ್ಯಾಜ್ಯ ವಿಲೇವಾರಿ ಕುರಿತು NGT ಮತ್ತು ಸುಪ್ರೀಂ ಕೋರ್ಟ್ ಕಾಲಕಾಲಕ್ಕೆ ಪರಿಶೀಲನೆ ನಡೆಸುತ್ತಿರುವುದನ್ನು ಉಲ್ಲೇಖಿಸಿದರು.
ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು, ಯಾವುದೇ ನೆಪಗಳನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿ, ಅನುದಾನ ಮತ್ತು ಜಾಗದ ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸಿ, ನಿಗದಿತ ಸಮಯದೊಳಗೆ ಉಳಿದ ಎಲ್ಲಾ ಶೌಚಾಲಯ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.











