ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊರತಂದಿರುವ ಕರಡು ಪಾರ್ಕಿಂಗ್ ನಿಯಮಗಳು-2026ರ ಅಡಿಯಲ್ಲಿ ನಗರವಾಸಿಗಳು ತಮ್ಮ ಮನೆಯ ಮುಂಭಾಗದ ರಸ್ತೆಯಲ್ಲಿ ವಾಹನ ನಿಲ್ಲಿಸಲು ವಾರ್ಷಿಕ ₹15,000 ರಿಂದ ₹25,000 ವರೆಗೆ ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ವರದಿಗಳನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಖಂಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಈ ನೀತಿಯನ್ನು “ತುಘಲಕ್ ನೀತಿ” ಮತ್ತು “ಪಾರ್ಕಿಂಗ್ ಲೂಟಿ” ಎಂದು ಕರೆದ ಅವರು, ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಕೃಷ್ಣ ಬೈರೇಗೌಡರು ಈ ಯೋಜನೆಯನ್ನು ಜಾರಿಗೆ ತರಲು ಸ್ಕೆಚ್ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
“ಕಾಂಗ್ರೆಸ್ ಸರ್ಕಾರದ ತುಘಲಕ್ ದರ್ಬಾರಿನಲ್ಲಿ ಬೆಂಗಳೂರಿನ ಜನತೆ ತಮ್ಮ ಸ್ವಂತ ಮನೆಯ ಮುಂದೆ ತಮ್ಮ ಸ್ವಂತ ಕಾರು ನಿಲ್ಲಿಸುವುದಕ್ಕೂ ದಂಡ ಕಟ್ಟಬೇಕಂತೆ,” ಎಂದು ಅಶೋಕ್ ಹೇಳಿದ್ದಾರೆ. ಜಿಬಿಎ ಹೊಸ ಪಾರ್ಕಿಂಗ್ ರೂಲ್ಸ್ 2026 ಹೆಸರಿನಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳಿಗೆ ವರ್ಷಕ್ಕೆ ₹15,000, ಸೆಡಾನ್‌ಗಳಿಗೆ ₹20,000 ಮತ್ತು ಎಸ್‌ಯುವಿಗಳಿಗೆ ₹25,000 ಶುಲ್ಕ ವಿಧಿಸುವ ಪ್ರಸ್ತಾವವಿದೆ ಎಂದು ಅವರು ತಿಳಿಸಿದ್ದಾರೆ.
ಅವರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ: ಖಾಲಿ ನಿವೇಶನಗಳಲ್ಲಿ ಕಸ ತೆಗೆಯುವ ನೆಪದಲ್ಲಿ ಕೋಟಿ ಕೋಟಿ ಗುಡಿಸಿದ್ದು ಸಾಲದೆಂಬಂತೆ, ಈಗ ಮನೆ ಮುಂದಿನ ಪಾರ್ಕಿಂಗ್ ಮೇಲೆಯೂ ಕಣ್ಣು ಬಿದ್ದಿದೆಯೇ? ಸಾರ್ವಜನಿಕರು ಲಕ್ಷಾಂತರ ರೂಪಾಯಿ ತೆರಿಗೆ ಕಟ್ಟಿ ಮನೆ ಕಟ್ಟಿಕೊಂಡಿರುವುದು ಸರ್ಕಾರದ ಕಮಿಷನ್ ದಂಧೆಗೆ ಸಾಲದೆಂದು ಮನೆ ಮುಂದಿನ ಜಾಗಕ್ಕೂ ಲೂಟಿ ಶುಲ್ಕ ವಿಧಿಸುತ್ತಿದ್ದೀರಾ?
ರಸ್ತೆಗಳ ಸ್ಥಿತಿಯನ್ನು ಗಮನಿಸಿ ಅವರು ಪ್ರಶ್ನಿಸಿದ್ದಾರೆ: ಸಾಲು ಸಾಲು ಗುಂಡಿಗಳು, ಮಳೆಯಾದರೆ ಈಜುಕೊಳವಾಗುವ ರಸ್ತೆಗಳನ್ನು ಸರಿಪಡಿಸಲು ಯೋಗ್ಯತೆಯಿಲ್ಲದ ಸರ್ಕಾರಕ್ಕೆ ಈ ಪಾರ್ಕಿಂಗ್ ಟ್ಯಾಕ್ಸ್ ವಸೂಲಿ ಮಾಡಲು ಏನು ನೈತಿಕ ಹಕ್ಕಿದೆ?
ಸಾರ್ವಜನಿಕ ಸಾರಿಗೆಯನ್ನು ಸುಧಾರಿಸುವಂತೆ ಕರೆ ನೀಡಿರುವ ಅಶೋಕ್, “ಪಾರ್ಕಿಂಗ್ ದರ ಏರಿಸಿ ಜನರನ್ನು ದೋಚುವ ಮೊದಲು ನಂಟುಕೊಂಡಿರುವ ಮೆಟ್ರೋ ಕಾಮಗಾರಿ ಚುರುಕುಗೊಳಿಸಿ, ಬಿಎಂಟಿಸಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿ,” ಎಂದು ಹೇಳಿದ್ದಾರೆ.
ಮನೆ ಮುಂದೆ ವಾಹನ ನಿಲ್ಲಿಸುವುದಕ್ಕೂ ಕನ್ನ ಹಾಕಲು ಹೊರಟಿರುವ ಈ ಜನವಿರೋಧಿ ‘ಪಾರ್ಕಿಂಗ್ ಲೂಟಿ ನೀತಿ’ಯನ್ನು ಕಾಂಗ್ರೆಸ್ ಸರ್ಕಾರ ತಕ್ಷಣವೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಂಬರುವ ಜಿಬಿಎ ಚುನಾವಣೆಯಲ್ಲಿ ಬೆಂಗಳೂರಿನ ಜನತೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ಗ್ಯಾರೆಂಟಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಗಮನಿಸಿ: ಕರ್ನಾಟಕ ಸರ್ಕಾರವು ಗ್ರೇಟರ್ ಬೆಂಗಳೂರು ಪ್ರದೇಶ (ಪಾರ್ಕಿಂಗ್) ನಿಯಮಗಳು, 2026ರ ಕರಡು ಅಧಿಸೂಚನೆಯನ್ನು ಪ್ರಕಟಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿದೆ. ಈ ನಿಯಮಗಳು ಜಾರಿಗೆ ಬಂದರೆ ವಸತಿ ಪ್ರದೇಶಗಳಲ್ಲಿ ರಸ್ತೆಬದಿ ಪಾರ್ಕಿಂಗ್‌ಗೆ ವಾರ್ಷಿಕ ಪರವಾನಗಿ ಕಡ್ಡಾಯವಾಗಲಿದೆ.











