ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ; ಬಿಡದಿ ವಿವಾದದಲ್ಲಿ ಸಿಎಂಗೆ ಟಾಂಗ್, ಹನೂರು ಶೂಟೌಟ್ ಕುರಿತೂ ಪ್ರತಿಕ್ರಿಯೆ
ಹಾಸನ: ವಂದೇ ಮಾತರಂ ಗೀತೆಗೆ ಗೌರವ ಸಲ್ಲಿಸಬೇಕು ಎಂದು ಸಂಸತ್ತು ನಿರ್ಣಯಿಸಿದ್ದರೂ ಕಾಂಗ್ರೆಸ್ ಅದನ್ನು ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಟೀಕೆ ಮಾಡಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಅವರು ವಂದೇ ಮಾತರಂ ಗಾಯನಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪದ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದರು.
“ಈ ಗೀತೆಗೆ ಪ್ರತಿಯೊಬ್ಬರೂ ಗೌರವ ಸಲ್ಲಿಸಬೇಕು ಎನ್ನುವುದು ನಮ್ಮ ಅಭಿಪ್ರಾಯ. ಕಾಂಗ್ರೆಸ್ ನಾಯಕರು ಇಲ್ಲಿ ಸಣ್ಣತನ ತೋರಿಸುವ ಅಗತ್ಯವಿಲ್ಲ. ಮಹಾತ್ಮಾ ಗಾಂಧಿ ಅವರು ಭಾಗಿಯಾಗಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಈ ಗೀತೆಯನ್ನು ಹಾಡಲಾಗಿತ್ತು. ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಅವರೇ ಹಾಡಿದ್ದರು. ಹೀಗಿದ್ದೂ ಕಾಂಗ್ರೆಸ್ ವಂದೇ ಮಾತರಂ ಅನ್ನು ವಿರೋಧಿಸುತ್ತಿರುವುದು ಸರಿಯಲ್ಲ” ಎಂದು ಕುಮಾರಸ್ವಾಮಿ ಹೇಳಿದರು.
ಸೋನಿಯಾ ಗಾಂಧಿ ಅವರೇ ವಂದೇ ಮಾತರಂ ಗಾಯನಕ್ಕೆ ಅಡ್ಡಿ ಮಾಡಿದರು ಎಂದು ಸುದ್ದಿಗಾರರು ಪ್ರಶ್ನಿಸಿದಾಗ, “ಸೋನಿಯಾ ಗಾಂಧಿ ಅವರಿಂದ ಇನ್ನೇನು ನಿರೀಕ್ಷೆ ಮಾಡಬಹುದು? ಅವರು ನಮ್ಮ ದೇಶದವರೇ? ಮದುವೆಯಾಗಿ ನಮ್ಮ ದೇಶಕ್ಕೆ ಬಂದರು ಅಷ್ಟೇ. ಅವರಲ್ಲಿ ಹರಿಯುತ್ತಿರುವುದು ಇಟಲಿ ರಕ್ತವಲ್ಲವೇ?” ಎಂದು ಕಿಡಿ ಕಾರಿಸಿದರು. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಈಗಾಗಲೇ ಪಾಠ ಕಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಶಾಸ್ತಿ ಮಾಡಲಿದ್ದಾರೆ ಎಂದೂ ಅವರು ಹೇಳಿದರು.
ಹನೂರು ಶೂಟೌಟ್ ಕುರಿತು:
ಹನೂರಿನ ಶೂಟೌಟ್ ಪ್ರಕರಣದ ಬಗ್ಗೆ ಸರ್ಕಾರ ಬುಲೆಟಿನ್ ಬಿಡುಗಡೆ ಮಾಡಿದೆ. ಒಂದೇ ಕುಟುಂಬದ ಮೂವರ ಸಾವಿನ ಬಗ್ಗೆ ಜನರ ಆಕ್ರೋಶ ಸಹಜ ಎಂದು ಕುಮಾರಸ್ವಾಮಿ ಹೇಳಿದರು. “ಸರ್ಕಾರ ರೈತರು ಮತ್ತು ಅವರ ಕುಟುಂಬಗಳ ಉತ್ತಮ ಬದುಕಿಗೆ ದಾರಿ ಮಾಡಿದರೆ ಇಂತಹ ಘಟನೆಗಳು ಆಗುವುದಿಲ್ಲ. ಇದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು” ಎಂದರು. ಜಿಂಕೆ ಬೇಟೆಗೆ ಹೋಗಿದ್ದವರು ಎಂದು ಸರ್ಕಾರ ಹೇಳುತ್ತಿದೆ. ಸಿಎಂ ತನಿಖೆ ಮಾಡಿ ಹೇಳಿದ್ದಾರೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಸಾಯುವ ರೀತಿಯಲ್ಲಿ ಗುಂಡು ಹಾರಿಸಿದ್ದು ತಪ್ಪು. ಕಾಲಿಗೆ ಅಥವಾ ಜೀವಕ್ಕೆ ಅಪಾಯವಾಗದಂತೆ ಗುಂಡು ಹಾರಿಸಿದ್ದರೆ ಎಲ್ಲರೂ ಒಪ್ಪುತ್ತಿದ್ದರು ಎಂದು ಅವರು ಅಭಿಪ್ರಾಯಪಟ್ಟರು.
ಬಿಡದಿ ವಿವಾದ: ಸಿಎಂಗೆ ಟಾಂಗ್
ಬಿಡದಿ ಪಾದಯಾತ್ರೆ ಬಗ್ಗೆ ಕಾಂಗ್ರೆಸ್ ನೀಡುತ್ತಿರುವ ಜಾಹೀರಾತುಗಳ ಕುರಿತು ಮಾತನಾಡಿದ ಕುಮಾರಸ್ವಾಮಿ, “ಇಂತಹ ಇನ್ನೂ ಹತ್ತು ಜಾಹೀರಾತುಗಳನ್ನು ಕೊಟ್ಟರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ” ಎಂದರು. ರೈತರು ಮತ್ತು ರೈತ ಮಹಿಳೆಯರು “ನಾವು ಭೂಮಿ ಕೊಡಲ್ಲ” ಎಂದು ಹೇಳುತ್ತಿದ್ದಾರೆ. 500 ದಿನಗಳಿಂದ ಹೋರಾಟ ನಡೆಯುತ್ತಿದೆ. ದಬ್ಬಾಳಿಕೆ ಮಾಡಿ, ರೌಡಿಗಳನ್ನು ಬಿಟ್ಟು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. “ನೀವು ಭೂಮಿ ಕೊಡದಿದ್ದರೆ ಗ್ರಾಂಟ್ ಭೂಮಿ ವಾಪಸ್ ಪಡೆಯುತ್ತೇವೆ” ಎಂದು ದಬ್ಬಾಳಿಕೆ ಮಾಡಿ ಏನು ಸಾಧಿಸಲು ಹೊರಟಿದ್ದಾರೆ? ಈ ಯೋಜನೆ ನಿಮಗಷ್ಟೇ ಯಾಕೆ ಬೇಕು? ಬೇರೆಡೆ ಜಾಗ ಇಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಿಮ್ಮ ಪಕ್ಷದ ಸತ್ಯಶೋಧನಾ ಸಮಿತಿ ವರದಿಯನ್ನು ಇಡೀ ರಾಜ್ಯದ ಮುಂದೆ ಇಡಿ. ಕಾಗೋಡು ತಿಮ್ಮಪ್ಪ ಸಮಿತಿಯಲ್ಲಿ ನೀವು ಸದಸ್ಯರಾಗಿದ್ದಿರಿ ಅಲ್ಲವೇ? ಆ ವರದಿಯಲ್ಲಿ ಯಾವುದೇ ಕಾರಣಕ್ಕೂ ಟೌನ್‌ಶಿಪ್ ಬರಕೂಡದು ಎಂದು ಹೇಳಲಾಗಿದೆ. ಆಗ ನೀವು ಏನು ಶಿಫಾರಸು ಮಾಡಿದ್ದೀರಿ? ಅದೇ ಅಂಶಗಳನ್ನು ಮುದ್ರಿಸಿ ಜಾಹೀರಾತು ಕೊಡಿ. ಹಾಗೆ ಮಾಡಿದರೆ ನಮಗೂ ಸ್ವಲ್ಪ ಹಣ ಉಳಿಯುತ್ತದೆ” ಎಂದು ಮುಖ್ಯಮಂತ್ರಿಗೆ ಟಾಂಗ್ ನೀಡಿದರು.











