ಬೆಂಗಳೂರು: ಮುಜರಾಯಿ, ಮೀನುಗಾರಿಕೆ ಹಾಗೂ ಒಳಸಾರಿಗೆ ಬಂದರು ಖಾತೆ ಸಚಿವರಾದ ಕೆ.ಎಸ್. ಬಸವಂತಪ್ಪ ಅವರು ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸರ್ಕಾರ ಹೆಚ್ಚುವರಿಯಾಗಿ ಒದಗಿಸಿರುವ ಕೊಠಡಿ ಸಂಖ್ಯೆ 343ರಲ್ಲಿ ಸೋಮವಾರ ಅಧಿಕೃತವಾಗಿ ಕಾರ್ಯಾರಂಭ ಮಾಡಿದರು.
ಕಾರ್ಯಾರಂಭದ ಸಂದರ್ಭದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದ ಸಚಿವರು, ತಮ್ಮ ಇಲಾಖೆಗಳ ವ್ಯಾಪ್ತಿಯ ಆಡಳಿತಾತ್ಮಕ ಕಾರ್ಯಗಳಿಗೆ ಚಾಲನೆ ನೀಡಿದರು.

ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಾಲಯಗಳ ಅಭಿವೃದ್ಧಿ, ಭಕ್ತರಿಗೆ ಅಗತ್ಯ ಸೌಲಭ್ಯಗಳ ಕಲ್ಪನೆ, ಮೀನುಗಾರರ ಕಲ್ಯಾಣ ಹಾಗೂ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ, ಒಳನಾಡು ಜಲಸಾರಿಗೆ ಮತ್ತು ಬಂದರು ಸಂಬಂಧಿತ ಮೂಲಸೌಕರ್ಯಗಳ ಸುಧಾರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಆಡಳಿತಕ್ಕೆ ಒತ್ತು ನೀಡುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್. ಆಂಜನೇಯ, ಸಚಿವರ ಪತ್ನಿ ಮಮತಾ ಬಸವಂತಪ್ಪ ಸೇರಿದಂತೆ ಹಲವು ಗಣ್ಯರು, ಆಪ್ತರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು ಸಚಿವರಿಗೆ ಶುಭಾಶಯ ಕೋರಿದರು.
ಹೊಸ ಕಚೇರಿಯಲ್ಲಿ ಕಾರ್ಯಾರಂಭಿಸಿರುವ ಸಚಿವ ಬಸವಂತಪ್ಪ ಅವರಿಗೆ ಮುಂದಿನ ದಿನಗಳಲ್ಲಿ ತಮ್ಮ ಖಾತೆಗಳ ವ್ಯಾಪ್ತಿಯ ಪ್ರಮುಖ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ವೇಗ ನೀಡುವ ಹೊಣೆಗಾರಿಕೆ ಎದುರಾಗಿದೆ.











