ಬೆಂಗಳೂರು: ನಾಡಿನ ಖ್ಯಾತ ಹಿರಿಯ ರಂಗಕರ್ಮಿ, ನಿರ್ದೇಶಕ, ರಂಗಶಿಕ್ಷಕ ಹಾಗೂ ಚಿಂತಕ ಚಿದಂಬರರಾವ್ ಜಂಬೆ ಅವರ ನಿಧನಕ್ಕೆ ಕರ್ನಾಟಕ ವಿಧಾನಪರಿಷತ್ ಉಪಸಭಾಪತಿ ಹಾಗೂ ಹಿರಿಯ ಕಲಾವಿದೆ ಡಾ. ಉಮಾಶ್ರೀ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ರಂಗಭೂಮಿಯ ಬೆಳವಣಿಗೆಯಲ್ಲಿ ಹಲವು ದಶಕಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಚಿದಂಬರರಾವ್ ಜಂಬೆ ಅವರು ರಂಗನಿರ್ದೇಶನದ ಜೊತೆಗೆ ರಂಗಶಿಕ್ಷಣಕ್ಕೂ ವಿಶೇಷ ಮಹತ್ವ ನೀಡಿದ್ದರು. ಹಲವು ತಲೆಮಾರುಗಳ ಕಲಾವಿದರು ಮತ್ತು ರಂಗಾಸಕ್ತರಿಗೆ ತರಬೇತಿ ನೀಡಿ ರಂಗಕ್ಷೇತ್ರಕ್ಕೆ ಹೊಸ ಪೀಳಿಗೆಯನ್ನು ತಂದುಕೊಟ್ಟ ರಂಗಶಿಕ್ಷಕರಾಗಿದ್ದರು.

ವಿಭಿನ್ನ ಸಾಹಿತ್ಯಿಕ ಹಾಗೂ ಸಾಮಾಜಿಕ ಹಿನ್ನೆಲೆಯ ಕೃತಿಗಳನ್ನು ರಂಗಕ್ಕೆ ಅಳವಡಿಸುವ ಮೂಲಕ ಕನ್ನಡ ರಂಗಭೂಮಿಯ ಪ್ರಯೋಗಶೀಲತೆಯನ್ನು ವಿಸ್ತರಿಸಿದ್ದರು. ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಅನೇಕರು ರಂಗಭೂಮಿ, ಚಿತ್ರರಂಗ, ಕಿರುತೆರೆ ಹಾಗೂ ರಂಗಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮದೇ ಆದ ಸ್ಥಾನ ಪಡೆದುಕೊಂಡಿದ್ದಾರೆ.
ಡಾ. ಉಮಾಶ್ರೀ ಅವರು ತಮ್ಮ ಸಂತಾಪ ಸಂದೇಶದಲ್ಲಿ ಹೇಳಿದ್ದು: “ತಮಗೂ ಕೂಡ ಹಿರಿಯರಾದ ಚಿದಂಬರರಾವ್ ಜಂಬೆ ಅವರು ಒಳ್ಳೆಯ ಮಾರ್ಗದರ್ಶಕರಾಗಿದ್ದರು. ಅವರ ನಿರ್ದೇಶನದ ‘ಶ್ರಮಿಷ್ಠೆ’ ನಾಟಕವನ್ನು ನನ್ನ ಮೂಲಕ ಪ್ರದರ್ಶಿಸಿ, ನನ್ನನ್ನು ಇಡೀ ನಾಡಿನಾದ್ಯಂತ ‘ಶ್ರಮಿಷ್ಠೆ’ಯಾಗಿ ಪರಿಚಯಿಸಿದರು. ‘ಶ್ರಮಿಷ್ಠೆ’ ಮೂಲಕ ಸಮಕಾಲೀನ ಪ್ರೇಕ್ಷಕರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಪ್ರಯತ್ನ ಅವರ ನಿರ್ದೇಶನದಲ್ಲಿ ಎದ್ದು ಕಾಣುತ್ತಿತ್ತು.”
ಕರ್ನಾಟಕ ರಂಗಶಿಕ್ಷಣ ಕ್ಷೇತ್ರದಲ್ಲಿ ಚಿದಂಬರರಾವ್ ಜಂಬೆ ಅವರ ಕೊಡುಗೆ ಅನನ್ಯವಾದುದು. ಅವರ ಅಗಲಿಕೆ ನಿಜಕ್ಕೂ ಅತ್ಯಂತ ದುಃಖ ತರುವಂತಹದ್ದು. ಜಂಬೆಯವರ ನಿಧನದಿಂದ ಕನ್ನಡ ರಂಗಕ್ಷೇತ್ರ ಬಡವಾಗಿದೆ ಎಂದು ಡಾ. ಉಮಾಶ್ರೀ ಅವರು ಹೇಳಿದ್ದಾರೆ.
ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ. ಅವರ ಅಗಲಿಕೆಯಿಂದ ಕುಟುಂಬಕ್ಕಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.










