ಬೆಂಗಳೂರು: ರಾಗಿ ಬೆಳೆಗೆ ಕೇಂದ್ರ ಸರ್ಕಾರದ Minimum Support Price (MSP) ಯೋಜನೆಯಡಿ ರೈತರಿಗೆ ಬರಬೇಕಾದ ₹1,611 ಕೋಟಿ ರೂಪಾಯಿ ಬಾಕಿ ಹಣವನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಇನ್ನೂ ಬಿಡುಗಡೆ ಮಾಡದೆ ಉಳಿಸಿಕೊಂಡಿದೆ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಒಂದೆಡೆ ಮುಂಗಾರು ಮಳೆ ಆರಂಭವಾಗಿ ರೈತರು ಹೊಲ ಉಳುಮೆ ಮತ್ತು ಬಿತ್ತನೆಗೆ ಸಿದ್ಧತೆ ನಡೆಸುತ್ತಿರುವಾಗ, ತಮ್ಮದೇ ಬೆವರಿನ ದುಡಿಮೆಯ ಹಣಕ್ಕಾಗಿ ರೈತರು ಸರ್ಕಾರದ ಬಾಗಿಲು ತಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲಾವಾರು ಬಾಕಿ ವಿವರ:
- ತುಮಕೂರು : 34,543 ರೈತರಿಗೆ ₹370 ಕೋಟಿ
- ಹಾಸನ : 29,090 ರೈತರಿಗೆ ₹320 ಕೋಟಿ
- ಮೈಸೂರು : 16,659 ರೈತರಿಗೆ ₹179 ಕೋಟಿ
- ಚಿಕ್ಕಮಗಳೂರು : 14,297 ರೈತರಿಗೆ ₹169 ಕೋಟಿ
- ಮಂಡ್ಯ : 11,521 ರೈತರಿಗೆ ₹126 ಕೋಟಿ
ಒಟ್ಟು ಒಂದು ಲಕ್ಷಕ್ಕೂ ಹೆಚ್ಚು ರೈತರು ಈ ಬಾಕಿ ಹಣಕ್ಕಾಗಿ ಕಾಯುತ್ತಿದ್ದಾರೆ ಎಂದು ಅಶೋಕ್ ತಿಳಿಸಿದ್ದಾರೆ.
ಅಧ್ಯಕ್ಷ ಸಾಧನಾ ಸಮಾವೇಶಗಳಿಗೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡುವ ಸರ್ಕಾರಕ್ಕೆ, ಖಾಸಗಿ ವಿಮಾನಗಳಲ್ಲಿ ಪ್ರಯಾಣಕ್ಕೆ ಹಣವಿದ್ದರೂ, ರೈತರ ಬಾಕಿ ಹಣ ಬಿಡುಗಡೆ ಮಾಡಲು ಖಜಾನೆ ಖಾಲಿಯಾಗಿದೆ ಎಂದು ಅವರು ವಿಷಾದಿಸಿದ್ದಾರೆ.
ರೈತರು ಈಗ ಭೂಮಿ ಹಸನು ಮಾಡಲು, ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಲು ಸಾಲದ ಮೊರೆ ಹೋಗುವಂತಾಗಿದೆ ಎಂದು ಆರೋಪಿಸಿರುವ ಅಶೋಕ್, ತಕ್ಷಣವೇ ₹1,611 ಕೋಟಿ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇಲ್ಲವಾದರೆ ರಾಜ್ಯದ ರೈತರೊಂದಿಗೆ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ. “ಅನ್ನದಾತನಿಗೆ ಅನ್ಯಾಯ ಮಾಡಿದ ಯಾವ ಸರ್ಕಾರವೂ ಉಳಿದ ಉದಾಹರಣೆ ಇತಿಹಾಸದಲ್ಲಿ ಇಲ್ಲ” ಎಂದು ಅವರು ಹೇಳಿದ್ದಾರೆ.












