ಬೆಂಗಳೂರು/ಶಬರಿಮಲೆ: ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ.
ಕೊಚ್ಚಿನ್‌ನ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಶ್ರೀ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ ನಂತರ ಸಚಿವರು ಇರುಮುಡಿ ಕಟ್ಟಿ ಶಬರಿಮಲೆಗೆ ಹೊರಟರು. ಮಧ್ಯಾಹ್ನದ ವೇಳೆಗೆ ಪಂಪಾ ನದಿ ತೀರವನ್ನು ತಲುಪಿದ ಅವರು, ಅಲ್ಲಿ ಪುಣ್ಯಸ್ನಾನ ಮಾಡಿ ಸನ್ನಿಧಾನಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಸಂಜೆ ಅಯ್ಯಪ್ಪ ಸನ್ನಿಧಿಯಲ್ಲಿ ಪಡಿಪೂಜೆ ಮತ್ತು ಪುಷ್ಪಾಭಿಷೇಕವನ್ನು ನೆರವೇರಿಸುವ ಕಾರ್ಯಕ್ರಮವಿದೆ. ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ಅವರು ಕೈಗೊಂಡ ಮೊದಲ ಶಬರಿಮಲೆ ಯಾತ್ರೆ ಇದಾಗಿದೆ. ಇದಕ್ಕೂ ಮುಂಚೆ ಅವರು ಹಲವು ಬಾರಿ ಅಯ್ಯಪ್ಪನ ಸನ್ನಿಧಿಗೆ ಯಾತ್ರೆ ಕೈಗೊಂಡಿದ್ದಾರೆ.

ಭಕ್ತರ ದೊಡ್ಡ ತಂಡ ಜೊತೆಗೆ
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಮಂತ್ರಿಗಳಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಶಾಸಕ ಶರಣಗೌಡ ಕಂದಕೂರ್, ಮಾಜಿ ಶಾಸಕರು ಮಾಗಡಿ ಮಂಜುನಾಥ್ ಮತ್ತು ಹೆಚ್.ಎಂ. ರಮೇಶ್ ಗೌಡ ಸೇರಿದಂತೆ 30ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರು ಈ ಯಾತ್ರೆಯಲ್ಲಿ ಕುಮಾರಸ್ವಾಮಿ ಅವರೊಂದಿಗೆ ಭಾಗವಹಿಸಿದ್ದಾರೆ.
ಈ ಯಾತ್ರೆಯು ಸಚಿವರ ಆಧ್ಯಾತ್ಮಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಭಕ್ತರು ಹೇಳುತ್ತಿದ್ದಾರೆ.










