ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಲವಾದ ಗೆಲುವು
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಭೂತಪೂರ್ವ ಯಶಸ್ಸು ಸಾಧಿಸಿದ್ದಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. “ಇದು ನಮ್ಮ ಸರ್ಕಾರಕ್ಕೆ ಮಾತ್ರವಲ್ಲ, ರಾಜ್ಯದ ಜನತೆಯ ಹಿತಕ್ಕಾಗಿ ನೀಡಿರುವ ಬೆಂಬಲ” ಎಂದು ಅವರು ಹೇಳಿದರು.
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಗುರುವಾರ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಕೆ. ಹರಿಪ್ರಸಾದ್, ಮಳವಳ್ಳಿ ಶಿವಣ್ಣ, ಪಿ.ವಿ. ಮೋಹನ್, ವಿನಯ್ ಕಾರ್ತಿಕ್ ಮತ್ತು ತಿಪ್ಪಣ್ಣಪ್ಪ ಕಮಕನೂರು ಅವರನ್ನು ವಿಧಾನಸೌಧದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಅಭಿನಂದಿಸಿದರು. ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾವು ಯಾವ ಹೆಜ್ಜೆಯನ್ನು ಇಟ್ಟರೂ ಜೊತೆಗಿದ್ದೇವೆ ಎಂದು ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ. ನಮ್ಮ ಪಕ್ಷದ ಶಾಸಕರು ಒಗ್ಗಟ್ಟಾಗಿ ಬೆಂಬಲಿಸಿದ್ದಾರೆ” ಎಂದರು.
ಇತರ ಪಕ್ಷಗಳ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ
ಬೇರೆ ಪಕ್ಷಗಳಿಂದ ಹೆಚ್ಚುವರಿ ಮತಗಳು ಬಂದಿರುವುದನ್ನು ಸ್ವಾಗತಿಸಿದ ಸಿಎಂ, “ಅವರು ನಮ್ಮ ಮೇಲೆ ತೋರಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ. ಅವರ ಭಾವನೆಗಳನ್ನು ಅರಿತುಕೊಂಡು ರಾಜ್ಯದ ಸೇವೆಯಲ್ಲಿ ಮುಂದುವರೆಯುತ್ತೇವೆ” ಎಂದು ಭರವಸೆ ನೀಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಉಪಸ್ಥಿತಿಯಲ್ಲಿಯೇ ಸಿಎಂ ಮಾತನಾಡಿದರು. ಪಕ್ಷದ ಶಾಸಕರು, ನಾಯಕರು, ಪದಾಧಿಕಾರಿಗಳು ಮತ್ತು ಮಾಧ್ಯಮಗಳಿಗೆ ಧನ್ಯವಾದಗಳನ್ನು ಅರ್ಪಿಸಿದ ಅವರು, “ಮಾಧ್ಯಮಗಳು ಸಹ ಸರ್ಕಾರಕ್ಕೆ ಬೆಂಬಲವಾಗಿ ಸಲಹೆಗಳನ್ನು ನೀಡಿದ್ದಾರೆ” ಎಂದು ಹೇಳಿದರು.
ಗುಪ್ತ ಮತದಾನ, ಅಡ್ಡ ಮತದಾನದ ಆರೋಪ ತಳ್ಳಿದ ಸಿಎಂ
ಅಡ್ಡ ಮತದಾನಕ್ಕಾಗಿ ಕುದುರೆ ವ್ಯಾಪಾರ ನಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಡಿ.ಕೆ.ಶಿವಕುಮಾರ್, “ಇದು ಗುಪ್ತ ಮತದಾನ. ಯಾರು ಯಾರಿಗೆ ಮತ ಹಾಕಿದ್ದಾರೆ ಎಂಬುದು ನನಗೂ ಗೊತ್ತಿಲ್ಲ. ನಾನು ಯಾರ ಬಳಿಯೂ ಮತ ಕೇಳಲು ಹೋಗಿಲ್ಲ. ನಮ್ಮ ಐದು ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ವಿಶ್ವಾಸವಿತ್ತು” ಎಂದರು. ದಳ ಅಥವಾ ಬಿಜೆಪಿಯ ಆಂತರಿಕ ವಿಚಾರಗಳ ಬಗ್ಗೆ ತನಗೆ ಏನೂ ತಿಳಿಯದು ಎಂದು ಸ್ಪಷ್ಟಪಡಿಸಿದರು.
“ದಾರಿ ಇಲ್ಲದವರಿಗೆ ದಾರಿ ತೋರಿಸಿದ್ದೇವೆ”
ಎಸ್.ಟಿ. ಸೋಮಶೇಖರ್ ಅವರು ಸಹಕಾರ ಕೋರಿದ್ದಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿದ ಸಿಎಂ, “ಅವರನ್ನು ಉಚ್ಚಾಟನೆ ಮಾಡಿ ಕಳಿಸಿದ್ದಾರಲ್ಲವೇ? ದಾರಿ ಇಲ್ಲದವರಿಗೆ ದಾರಿ ತೋರಿಸುವ ಕೆಲಸವನ್ನು ನಾವು ಮಾಡಿದ್ದೇವೆ” ಎಂದು ಹೇಳಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಒಂದು ಮತವೂ ತಿರಸ್ಕೃತವಾಗದಂತೆ ತರಬೇತಿ ನೀಡಲಾಗಿತ್ತು ಎಂದು ಸಿಎಂ ಅವರು ತಿಳಿಸಿದರು.










