ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಅಡ್ಡ ಮತದಾನದ ವಿಚಾರವನ್ನು ತೀವ್ರವಾಗಿ ಖಂಡಿಸಿದ್ದಾರೆ.
“ನಮ್ಮ ಲೆಕ್ಕಾಚಾರದ ಪ್ರಕಾರ ನಾಲ್ಕು ಮತಗಳ ವ್ಯತ್ಯಾಸ ಕಂಡುಬಂದಿದೆ. ಇದು ಪಕ್ಷಕ್ಕೆ ದೊಡ್ಡ ಮುಜುಗರವಾಗಿದೆ. ಪಕ್ಷದ ಇಮೇಜ್‌ಗೆ ಸ್ವಲ್ಪ ಡ್ಯಾಮೇಜ್ ಆಗಿದೆ. ಇದು ಅಕ್ಷಮ್ಯ ಅಪರಾಧ” ಎಂದು ಸದಾನಂದಗೌಡ ಹೇಳಿದ್ದಾರೆ.
ಅಡ್ಡ ಮತದಾನ ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿದೆ ಎಂದು ಅವರು ಅಭಿಪ್ರಾಯಪಟ್ಟು, “ಇಂದಿನ ಕಾಲದಲ್ಲಿ ಬೇಧಿಸದ ಸಂಗತಿಗಳೇ ಇಲ್ಲ. ಸಮಿತಿ ನೀಡುವ ವರದಿ ಆಧಾರದಲ್ಲಿ ಕೇಂದ್ರ ನಾಯಕರು ತೀರ್ಮಾನ ಮಾಡಬಹುದು” ಎಂದರು.
ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ವಿಧಿಯನ್ನು ತೀವ್ರವಾಗಿ ವಿರೋಧಿಸಿರುವ ಸದಾನಂದಗೌಡ, “ನಮ್ಮ ಕೊಳಕು ರಾಜಕೀಯವನ್ನು ಧರ್ಮಸ್ಥಳದ ಪುಣ್ಯ ಮೆಟ್ಟಿಲುಗಳ ಮೇಲೆ ಇಡುವುದು ಸರಿಯಲ್ಲ” ಎಂದು ರಾಜ್ಯಾಧ್ಯಕ್ಷರಿಗೆ ಫೋನ್ ಮಾಡಿ ಹೇಳಿದ್ದಾಗಿ ತಿಳಿಸಿದ್ದಾರೆ. ಅಶೋಕ್ ಅವರೊಂದಿಗೂ ಫೋನ್‌ನಲ್ಲಿ ಮಾತಾಡಿದ್ದೇನೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಬಿಜೆಪಿ ನಾಯಕರು ಎಚ್ಚರಿಕೆ ವಹಿಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ವಿಧಾನಸಭೆ ಚುನಾವಣೆಯಲ್ಲಿ ಹಿನ್ನೆಡೆ, ಇಬ್ಬರು ಮುಖ್ಯಮಂತ್ರಿಗಳ ಪುತ್ರರು ಸೋತಿದ್ದು, ದಾವಣಗೆರೆಯಲ್ಲಿ ಸೋಲು ಉಂಟಾದಾಗಲೂ ಯಾವುದೇ ವಿಮರ್ಶೆ ನಡೆಯದಿದ್ದುದೇ ಈ ಸ್ಥಿತಿಗೆ ಕಾರಣ ಎಂದು ತಿಳಿಸಿದ್ದಾರೆ.
“ನಾಲ್ಕು ಜನರನ್ನು ಹೊರಗೆ ಕಳಿಸಿದ ಕಾರಣ ಪಕ್ಷದ ಆಂತರಿಕ ವಿಚಾರಗಳ ಚರ್ಚೆ ಆಗಲಿಲ್ಲ. ಮೊನ್ನೆಯ ಬೆಳವಣಿಗೆ ದೊಡ್ಡವರಿಗೆ ಹೇಗೆ ಅನಿಸಿದೆ ಗೊತ್ತಿಲ್ಲ, ಆದರೆ ಕಾರ್ಯಕರ್ತರಿಗೆ ದೊಡ್ಡ ನೋವಾಗಿದೆ. ಶಾಸಕರು ಮನೆಗೆ ದ್ರೋಹ ಬಗೆದಿದ್ದಾರೆ” ಎಂದು ಸದಾನಂದಗೌಡ ದುಃಖ ವ್ಯಕ್ತಪಡಿಸಿದ್ದಾರೆ.
ಜೂನ್ 13ರಂದು ಪ್ರೆಸ್ಟೀಜ್ ಟವರ್‌ನಲ್ಲಿ ಬಿಜೆಪಿ ನಾಯಕರು ವಿಧಾನ ಪರಿಷತ್ ಚುನಾವಣೆ ಬಗ್ಗೆ ಚರ್ಚೆ ನಡೆಸುತ್ತಿರುವುದಾಗಿ ತಿಳಿದು ರಾಜ್ಯಾಧ್ಯಕ್ಷರು ಹಾಗೂ ವಿಪಕ್ಷ ನಾಯಕರಿಗೆ ಫೋನ್ ಮಾಡಿದ್ದಾಗ ಅವರು ಸಿಗಲಿಲ್ಲ ಎಂದು ಅವರು ಹೇಳಿದ್ದಾರೆ. ನಂತರ ರಾಜ್ಯ ಪ್ರಧಾನ ಕಾರ್ಯದರ್ಶಿಗೆ ಫೋನ್ ಮಾಡಿ ಗಮನ ಹರಿಸುವಂತೆ ಕೇಳಿದ್ದೇನೆ ಎಂದು ತಿಳಿಸಿದ್ದಾರೆ.
ಚುನಾವಣೆ ಫಲಿತಾಂಶ ಬಂದಾಗ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಹೇಳಿರುವ ಸದಾನಂದಗೌಡ, ಎನ್‌ಡಿಎ ಅಭ್ಯರ್ಥಿ ಹಾಕಿದ ಬಗ್ಗೆ ವರಿಷ್ಠರ ತೀರ್ಮಾನಕ್ಕೆ ಕಾಮೆಂಟ್ ಮಾಡುವುದಿಲ್ಲ ಎಂದರು. ಆದರೆ ಅಡ್ಡ ಮತದಾನ ಮಾಡಿದವರ ಮೇಲೆ 100% ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
“ಧರ್ಮಸ್ಥಳಕ್ಕೆ ಹೋಗುವವರಿಗೂ ಇದು ಎಷ್ಟು ದೊಡ್ಡ ಮುಜುಗರ? ಇಷ್ಟೆಲ್ಲಾ ಆದ ನಂತರವೂ ತಕ್ಷಣ ಪ್ರಮುಖರು ಮತ್ತು ಕೋರ್ ಕಮಿಟಿಯನ್ನು ಕರೆದು ಚರ್ಚೆ ಮಾಡಬೇಕಿತ್ತು. ಆದರೆ ಅದು ನಡೆಯಲಿಲ್ಲ. ಕೆಳಗಿನ ಹಂತದಲ್ಲೂ ಚರ್ಚೆ ನಡೆಯಬೇಕಿತ್ತು” ಎಂದು ಅವರು ಹೇಳಿದ್ದಾರೆ.
ಸತ್ಯ ಶೋಧನಾ ಸಮಿತಿ ತನಿಖೆ ಸಿಬಿಐ ಅಥವಾ ಇಡಿ ರೀತಿ ನಡೆಯುತ್ತದೆಯೇ ಎಂದು ನೋಡುವುದಾಗಿ ಹೇಳಿರುವ ಸದಾನಂದಗೌಡ, “ಸತ್ಯ ಹೊರಗೆ ಬರಲಿ ಎಂದು ಮಂಜುನಾಥನಲ್ಲಿ ಪ್ರಾರ್ಥಿಸೋಣ” ಎಂದು ಹೇಳಿದ್ದಾರೆ.










