ಗದಗ: ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಷ್ಠೆಗೆ ಬದ್ಧರಾಗದೇ, ರೈತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಸರ್ಕಾರಿ ಜಮೀನಿನಲ್ಲಿ ಸ್ಯಾಟಲೈಟ್ ಟೌನ್‌ಶಿಪ್ ಅಭಿವೃದ್ಧಿಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಗದಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬಳಿ ಸಾಕಷ್ಟು ಜಮೀನುಗಳಿದ್ದು, ಅದನ್ನು ಬಳಸಿಕೊಂಡು ಟೌನ್‌ಶಿಪ್ ಅಭಿವೃದ್ಧಿ ಮಾಡುವುದು ಉತ್ತಮ ಎಂದು ಹೇಳಿದರು. “ನಾವು ಸಹ ಕೋಲಾರ ಮತ್ತು ಚಿಕ್ಕಬಳ್ಳಾಪುರ ಪ್ರದೇಶಗಳಲ್ಲಿ ಸುಮಾರು 2000 ಎಕರೆ ಸರ್ಕಾರಿ ಭೂಮಿಯಲ್ಲಿ ಇಂತಹ ಯೋಜನೆಗಳನ್ನು ಕೈಗೊಳ್ಳುವ ಬಗ್ಗೆ ಯೋಚಿಸಿದ್ದೇವೆ. ಅಲ್ಲಿ ಈಗಾಗಲೇ ಶಿಕ್ಷಣ ಸಂಸ್ಥೆಗಳು, ಕ್ಲಸ್ಟರ್‌ಗಳು ಹಾಗೂ ಮೂಲಸೌಕರ್ಯಗಳಿವೆ,” ಎಂದರು.
ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಸೂಕ್ತವಲ್ಲ ಎಂದು ಹೇಳಿದ ಬೊಮ್ಮಾಯಿ, ಸರ್ಕಾರ ತನ್ನದೇ ಜಮೀನಿನಲ್ಲಿ ಎಲ್ಲಾ ಲಾಜಿಸ್ಟಿಕ್ ವ್ಯವಸ್ಥೆಗಳೊಂದಿಗೆ ಯೋಜನೆ ಜಾರಿಗೊಳಿಸಿದರೆ ಅದು ಉತ್ತಮ ನಿರ್ಧಾರವಾಗುತ್ತದೆ ಎಂದು ಸಲಹೆ ನೀಡಿದರು.
ವಿಧಾನಸೌಧದಲ್ಲಿ ಚರ್ಚೆಗೆ ಆಹ್ವಾನಿಸಿರುವ ಮುಖ್ಯಮಂತ್ರಿಗಳ ಕುರಿತು ಪ್ರತಿಕ್ರಿಯಿಸಿದ ಅವರು, “ಎಲ್ಲಿ ಚರ್ಚೆ ಮಾಡಿದರೂ ವಿಷಯ ಅದೇ ಇರುತ್ತದೆ. ಪ್ರತಿಷ್ಠೆಗಳನ್ನು ಬಿಟ್ಟರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು,” ಎಂದರು.
ಬರಗಾಲ ಘೋಷಣೆಗಾಗಿ ಆಗ್ರಹ
ಮುಂಗಾರು ಮಳೆಯ ಕೊರತೆಯ ಬಗ್ಗೆ ಮಾತನಾಡಿದ ಬೊಮ್ಮಾಯಿ, ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು. “ಮೊದಲು ಸರ್ಕಾರ ಸರ್ವೆ ನಡೆಸಿ ಬರಗಾಲ ಘೋಷಣೆ ಮಾಡಬೇಕು. ಅದರಿಂದ ಮುಂದಿನ ಪರಿಹಾರ ಕ್ರಮಗಳು ಮತ್ತು ಕೇಂದ್ರದ ಅನುದಾನ ಪಡೆಯುವ ಪ್ರಕ್ರಿಯೆ ಆರಂಭವಾಗುತ್ತದೆ,” ಎಂದು ಅವರು ಹೇಳಿದರು.
ಕೃಷಿ ಇಲಾಖೆಯ ವಿರುದ್ಧ ಟೀಕೆ
ರಾಜ್ಯದಲ್ಲಿ ಕೃಷಿ ಸಚಿವರ ಕೊರತೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, “ರೈತರ ಸಮಸ್ಯೆ ಕೇಳುವವರೇ ಇಲ್ಲ. ಅಧಿಕಾರಿಗಳು ಹಾಗೂ ಸಚಿವರು ಏನು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಜನತೆ ಗಮನಿಸುತ್ತಿದ್ದಾರೆ,” ಎಂದು ಟೀಕಿಸಿದರು.
ಕೇಂದ್ರ ಯೋಜನೆಗಳ ನಕಲು ಆರೋಪ
ಉದ್ಯೋಗ ಮತ್ತು ಜಿಐಪಿಆರ್ ಯೋಜನೆ ಕುರಿತು ಮಾತನಾಡಿದ ಬೊಮ್ಮಾಯಿ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಯೋಜನೆಗಳನ್ನು ನಕಲಿಸುತ್ತಿದೆ ಎಂದು ಆರೋಪಿಸಿದರು. “ಜಾಬ್ ಸೀಕರ್ಸ್ ಮತ್ತು ಜಾಬ್ ಪ್ರೊವೈಡರ್ಸ್ ನಡುವೆ ಸಂಪರ್ಕ ಕಲ್ಪಿಸುವ ಪೋರ್ಟಲ್ ಈಗಾಗಲೇ ಕೇಂದ್ರ ಸರ್ಕಾರ ಆರಂಭಿಸಿದೆ. ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ದೊರೆತಿದೆ. ಇದು ಹೊಸ ಯೋಜನೆ ಅಲ್ಲ,” ಎಂದರು.
ಉದ್ಯೋಗ ಖಾತರಿ ಯೋಜನೆ ಜಾರಿಗೆ ಒತ್ತಾಯ
ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ದಿನಗಳ ಹೆಚ್ಚಳ ಕುರಿತು ಮಾತನಾಡಿದ ಅವರು, ಹೆಚ್ಚುವರಿ ದಿನಗಳ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಹೇಳಿದರು. “ಕೇಂದ್ರ ಸರ್ಕಾರ 100 ದಿನಗಳ ಹಣ ನೀಡುತ್ತದೆ. ಹೆಚ್ಚುವರಿ ದಿನಗಳನ್ನು ರಾಜ್ಯವೇ ನೀಡಬೇಕು,” ಎಂದು ಹೇಳಿದರು.
ನೀಟ್ ವಿವಾದ: ಕ್ರಮಕ್ಕೆ ಬೆಂಬಲ
ನೀಟ್ ಪರೀಕ್ಷೆಯ ಲೀಕ್ ಪ್ರಕರಣ ಕುರಿತು ಮಾತನಾಡಿದ ಬೊಮ್ಮಾಯಿ, ತಪ್ಪಿತಸ್ಥರ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿರುವುದನ್ನು ಸಮರ್ಥಿಸಿದರು. “ಮೊದಲ ಬಾರಿಗೆ ಇಷ್ಟು ಬೇಗ ಕ್ರಮ ಕೈಗೊಂಡು ವ್ಯವಸ್ಥೆಯನ್ನು ಸುಧಾರಿಸಲಾಗುತ್ತಿದೆ,” ಎಂದರು.
ರೈಲು ನಿಲುಗಡೆ ವಿಚಾರ
ಹುಬ್ಬಳ್ಳಿ-ಗದಗ ಬೈಪಾಸ್ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ನಿಲ್ಲಿಸದಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, “ಐದು ರಿಂದ ಹತ್ತು ನಿಮಿಷ ನಿಲ್ಲಿಸಿದರೆ ಏನೂ ಸಮಸ್ಯೆಯಾಗುವುದಿಲ್ಲ. ಈ ಆದೇಶವನ್ನು ವಾಪಸ್ ಪಡೆಯಲು ಹೋರಾಟ ನಡೆಸುತ್ತೇವೆ,” ಎಂದು ಹೇಳಿದರು.











