ಸುಳ್ಳು ಸುದ್ದಿಗಳಿಂದ ಪತ್ರಿಕೋದ್ಯಮಕ್ಕೆ ಮುಖ್ಯಮಂತ್ರಿ ಎಚ್ಚರಿಕೆ
ಬೆಂಗಳೂರು: ನಿರ್ಭೀತ ಪತ್ರಿಕಾ ವೃತ್ತಿ ಇಂದು ದೊಡ್ಡ ಸವಾಲಾಗಿದ್ದು, ತತ್ವಬದ್ಧ ವೃತ್ತಿಪರತೆಯಿಂದ ಮಾತ್ರ ಈ ಸವಾಲನ್ನು ಗೆಲ್ಲಬಹುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಗಾಂಧಿ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಪತ್ರಕರ್ತರು ತಮ್ಮ ವೃತ್ತಿಯ ತತ್ವ, ನೈತಿಕತೆ ಮತ್ತು ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಫೇಕ್ ನ್ಯೂಸ್‌ನಿಂದ ಪತ್ರಿಕಾ ವೃತ್ತಿಯನ್ನು ಹೊರತರುವುದು ಅಗತ್ಯ” ಎಂದು ಸಿಎಂ ಒತ್ತಾಯಿಸಿದರು.
ಸ್ವಂತ ಅನುಭವ ಹಂಚಿಕೊಂಡ ಸಿಎಂ
ತಾವು ಬೆಳಗ್ಗೆ ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದಾಗ, ಕೆಲವು ಟಿವಿ ವಾಹಿನಿಗಳು ತಮ್ಮನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಿದ್ದನ್ನು ಉಲ್ಲೇಖಿಸಿ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.
“ನಾನು ಆಸ್ಪತ್ರೆಗೆ ದಾಖಲಾಗಿಲ್ಲ. ಇದು ಸಂಪೂರ್ಣ ಸುಳ್ಳು ಸುದ್ದಿ,” ಎಂದು ಅವರು ಹೇಳಿದರು.
ಇದೇ ರೀತಿ ಮೇಕೆದಾಟು ಪಾದಯಾತ್ರೆಯ ವೇಳೆ ತಮಗೆ ಆದ ತೊಂದರೆಯನ್ನು “ಕುಡಿದು ಬರುತ್ತಿದ್ದಾರೆ” ಎಂಬ ರೀತಿಯಲ್ಲಿ ಬಿಂಬಿಸಿದುದನ್ನು ತೀವ್ರವಾಗಿ ಟೀಕಿಸಿದರು. ಇಂತಹ ಸುದ್ದಿಗಳು ಜನರಿಗೆ ತಪ್ಪು ಸಂದೇಶ ನೀಡುತ್ತವೆ ಎಂದು ಅವರು ಹೇಳಿದರು.
ಪತ್ರಕರ್ತರಿಗೆ ಕಿವಿಮಾತು
“ನಾನು ತಪ್ಪು ಮಾಡಿದರೆ ಅದನ್ನು ಬಹಿರಂಗಪಡಿಸಿ. ಆದರೆ ಸುಳ್ಳು ಸುದ್ದಿಗಳನ್ನು ಪ್ರಕಟಿಸಬೇಡಿ. ಸುದ್ದಿ ಪ್ರಕಟವಾಗುವವರೆಗೆ ಅದು ಪತ್ರಕರ್ತರದ್ದಾಗಿರುತ್ತದೆ. ಪ್ರಕಟವಾದ ನಂತರ ಅದು ಸಮಾಜದ ಆಸ್ತಿಯಾಗುತ್ತದೆ. ಆದ್ದರಿಂದ ಪ್ರತಿ ಸುದ್ದಿಯಲ್ಲೂ ಸತ್ಯ ಮತ್ತು ಪ್ರಾಮಾಣಿಕತೆ ಇರಬೇಕು,” ಎಂದು ಸಿಎಂ ಎಚ್ಚರಿಸಿದರು.
ಮಹಾತ್ಮ ಗಾಂಧಿ ಸೇರಿದಂತೆ ಹಲವು ಮಹನೀಯರು ಪತ್ರಕರ್ತರಾಗಿ ಪತ್ರಿಕಾ ವೃತ್ತಿಯ ಘನತೆ ಹೆಚ್ಚಿಸಿದ್ದಾರೆ. ಆ ಪರಂಪರೆಯನ್ನು ಮುಂದುವರಿಸಬೇಕು ಎಂದು ಅವರು ಕರೆ ನೀಡಿದರು.










