ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹೆಚ್‌ಎಂಟಿ ಕಾರ್ಖಾನೆಯ ಪುನಶ್ಚೇತನ ಪ್ಯಾಕೇಜ್‌ಗೆ ಅಡ್ಡಿಪಡಿಸಲು ರಾಜ್ಯ ಸರ್ಕಾರ ಅರಣ್ಯ ಇಲಾಖೆಯನ್ನು ಬಳಸಿಕೊಂಡು ಸಂಚು ರೂಪಿಸುತ್ತಿದೆ ಎಂದು ಅವರು ತುರ್ತು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇತ್ತೀಚೆಗೆ ಅರಣ್ಯ ಇಲಾಖೆಯ ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್. ರವೀಂದ್ರ ಕುಮಾರ್ ಅವರು ಹೆಚ್‌ಎಂಟಿ ವಶದಲ್ಲಿರುವ 430 ಎಕರೆ ಭೂಮಿಯನ್ನು ಅರಣ್ಯ ಪ್ರದೇಶವೆಂದು ಹೇಳಿ ತೆರವುಗೊಳಿಸುವಂತೆ ನೋಟಿಸ್ ನೀಡಿರುವುದು ಸುದ್ದಿಯಾಗಿದೆ. ಈ ಬಗ್ಗೆ ಸಚಿವ ಕುಮಾರಸ್ವಾಮಿ ಪ್ರತಿಕ್ರಿಯಿಸುತ್ತಾ, “ಈ ವಿಷಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅರಣ್ಯ ಇಲಾಖೆಯ ಮೂಲಕ ನೋಟಿಸ್ ನೀಡುವುದು ನ್ಯಾಯಾಂಗ ನಿಂದನೆ ಹಾಗೂ ಕಾನೂನುಬಾಹಿರ ಕ್ರಮ” ಎಂದು ಖಂಡಿಸಿದರು.

ಹೆಚ್‌ಎಂಟಿ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವ ಹಂತದಲ್ಲಿದ್ದ ಸಂದರ್ಭದಲ್ಲಿ ಈ ನೋಟಿಸ್ ನೀಡಲಾಗಿದೆ ಎಂದು ಸಚಿವರು ಆರೋಪಿಸಿದರು. “ನಾನು ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಒಪ್ಪಿಸಿ ಪ್ಯಾಕೇಜ್ ತರುವ ಪ್ರಯತ್ನ ಮಾಡುತ್ತಿದ್ದೆ. ಆಗಲೇ ಈ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ಅವರು ಹೇಳಿದರು.
175 ಎಕರೆ ಭೂಮಿ ಲೂಟಿ ಆರೋಪ:
ಸಚಿವರು ಹೆಚ್‌ಎಂಟಿ ಭೂಮಿಯಲ್ಲಿ 175 ಎಕರೆ ಜಾಗವನ್ನು ಅಕ್ರಮವಾಗಿ ಕಬಳಿಸಲಾಗಿದೆ ಎಂದು ಆರೋಪಿಸಿದರು. ಆ ಭೂಮಿಯಲ್ಲಿ ಬಹುಮಹಡಿ ಕಟ್ಟಡಗಳು ಮತ್ತು ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿವೆ ಎಂದು ಹೇಳಿದ ಅವರು, “ಆಗ ಅರಣ್ಯ ಇಲಾಖೆ ನೋಟಿಸ್ ನೀಡಿತ್ತಾ?” ಎಂದು ಪ್ರಶ್ನಿಸಿದರು. ಈ ಬಗ್ಗೆ ಸಂಪೂರ್ಣ ದಾಖಲೆಗಳು ತಮ್ಮ ಬಳಿ ಇದೆ ಎಂದು ಸ್ಪಷ್ಟಪಡಿಸಿದರು.

ಅಧಿಕಾರಿಗೆ ತೀವ್ರ ವಿರೋಧ:
ನಿವೃತ್ತಿ ಅಂಚಿನಲ್ಲಿರುವ ಅರಣ್ಯಾಧಿಕಾರಿ ರವೀಂದ್ರ ಕುಮಾರ್ ಅವರು 15 ದಿನಗಳ ಮುಂಚೆ ನೋಟಿಸ್ ನೀಡಿರುವುದನ್ನು “ಹುಂಬತನ” ಎಂದು ವಿಶೇಷಿಸಿದ ಸಚಿವರು, ಈ ಅಧಿಕಾರಿಯ ಹಿನ್ನೆಲೆ ಮತ್ತು ಇತರ ಮಾಹಿತಿಗಳನ್ನು ಬಹಿರಂಗಪಡಿಸುವುದಾಗಿ ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರದ ಉದ್ದೇಶ:
“ರಾಜ್ಯ ಸರ್ಕಾರ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ನಾಶಪಡಿಸುವ ದುರುದ್ದೇಶ ಹೊಂದಿದೆ. ಎನ್‌ಜಿಎಫ್, ಮೈಸೂರು ಪೇಪರ್ ಮಿಲ್ಸ್‌ನಂತಹ ಕಾರ್ಖಾನೆಗಳನ್ನು ನುಂಗಿದಂತೆ ಹೆಚ್‌ಎಂಟಿಯನ್ನೂ ನುಂಗಲು ನೋಡುತ್ತಿದೆ” ಎಂದು ಕುಮಾರಸ್ವಾಮಿ ಆರೋಪಿಸಿದರು. ಕುದುರೆಮುಖ ಉಕ್ಕು ಕಂಪನಿಗೂ ರಾಜ್ಯ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಹೇಳಿದರು.
ಹೆಚ್‌ಎಂಟಿ ಕಾರ್ಖಾನೆ ಬಾಹ್ಯಾಕಾಶ, ರಕ್ಷಣೆ, ಸಂಶೋಧನೆ ಕ್ಷೇತ್ರಗಳಿಗೆ ಯಂತ್ರಗಳನ್ನು ಒದಗಿಸುತ್ತಿದೆ ಎಂದು ಹೇಳಿದ ಸಚಿವರು, ವಿದೇಶಗಳಲ್ಲಿ ಇನ್ನೂ ಬೇಡಿಕೆ ಇರುವುದನ್ನು ಉಲ್ಲೇಖಿಸಿದರು. “ಇಂತಹ ಕಾರ್ಖಾನೆಗಳನ್ನು ಉಳಿಸಿಕೊಳ್ಳುವ ಬದಲು ನಾಶಪಡಿಸುವುದು ಸರಿಯಲ್ಲ” ಎಂದು ಅವರು ನೋವು ವ್ಯಕ್ತಪಡಿಸಿದರು.
ಆಂಧ್ರಪ್ರದೇಶ ಮತ್ತು ತೆಲಂಗಾಣದ ಉದಾಹರಣೆಗಳನ್ನು ನೀಡಿದ ಸಚಿವರು, ರಾಜ್ಯ ಸರ್ಕಾರವು ಕೈಗಾರಿಕೆಗಳನ್ನು ಆಕರ್ಷಿಸುವ ಬದಲು ತಡೆಯುತ್ತಿದೆ ಎಂದು ಟೀಕಿಸಿದರು.

ಕಾರ್ಮಿಕರಿಗೆ ಸಂತೃಪ್ತಿ:
ಹೆಚ್‌ಎಂಟಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಆತಂಕಪಡಬೇಕಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಾರ್ಖಾನೆಗೆ ಮರುಜೀವ ಕೊಡುವ ಕೆಲಸ ಮುಂದುವರಿಯುತ್ತದೆ ಎಂದು ಸಚಿವರು ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಲೋಕಸಭೆ ಸದಸ್ಯ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಹಿರಿಯ ಮುಖಂಡ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.










