ಬೆಂಗಳೂರು, ಜುಲೈ ೦೯: ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ಅವರು ಬೆಳ್ಳಂದೂರು ವೇಸ್ಟ್ ವಿಯರ್/ಔಟ್‌ಲೆಟ್‌ನಿಂದ ಓಲ್ಡ್ ಏರ್‌ಪೋರ್ಟ್ ರಸ್ತೆ ಸಮೀಪದ ವರ್ಜೀನಿಯಾ ಮಾಲ್‌ವರೆಗಿನ ಪ್ರಸ್ತಾಪಿತ ರಾಜಕಾಲುವೆ ಬಫರ್ ವಲಯ ಸಂರಕ್ಷಣೆ, ಸರ್ವಿಸ್ ರಸ್ತೆ ನಿರ್ಮಾಣ ಮತ್ತು ಪ್ರವಾಹ ನಿಯಂತ್ರಣ ಯೋಜನೆಯ ಸ್ಥಳ ಪರಿಶೀಲನೆ ನಡೆಸಿದರು.
ಸ್ಥಳ ಪರಿಶೀಲನಾ ವೇಳೆ ಯೋಜನೆಯ ತಾಂತ್ರಿಕ ಅಂಶಗಳು, ಭೂಸ್ವಾಧೀನ ಪ್ರಕ್ರಿಯೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ವಿವರವಾದ ಸಮಾಲೋಚನೆ ನಡೆಸಿದ ಆಯುಕ್ತರು, ಅಗತ್ಯ ನಿರ್ದೇಶನಗಳನ್ನು ನೀಡಿದರು.

ಪರಿಶೀಲಿಸಿದ ಪ್ರಮುಖ ಸ್ಥಳಗಳು:
- ಹೊರ ವರ್ತುಲ ರಸ್ತೆ
- ಬೆಳ್ಳಂದೂರು ರೈಲು ನಿಲ್ದಾಣ
- ೧೦೦ ಅಡಿ ರಸ್ತೆ ಮುನ್ನೇಕೊಳಲು ಎಸ್.ಟಿ.ಪಿ.
- ವರ್ತೂರು ಕೆರೆ ಬಫರ್ ವಲಯ
- ವರ್ತೂರು ಕೋಡಿ ಜಂಕ್ಷನ್
ರಾಜಕಾಲುವೆಯ ಮೂಲ ಗಡಿ, ಬಫರ್ ವಲಯ, ಭೂಸ್ವಾಧೀನಕ್ಕೆ ಒಳಪಡುವ ಪ್ರದೇಶಗಳು, ಸರ್ವಿಸ್ ರಸ್ತೆ ನಿರ್ಮಾಣ ಸಾಧ್ಯತೆ ಹಾಗೂ ಪ್ರವಾಹ ನಿಯಂತ್ರಣಕ್ಕೆ ಸಂಬಂಧಿಸಿದ ತಾಂತ್ರಿಕ ವಿಷಯಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಂಟಿ ಸರ್ವೆಗೆ ನಿರ್ದೇಶನ
ರಾಜಕಾಲುವೆ ಮತ್ತು ಕೆರೆಗಳ ಮೂಲ ಗಡಿಗಳನ್ನು ಕಂದಾಯ ದಾಖಲೆಗಳಿಗೆ ಅನುಸಾರವಾಗಿ ಗುರುತಿಸುವುದು, ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣವನ್ನು ನಿಖರವಾಗಿ ನಿರ್ಧರಿಸಿ ಗಡಿ ಕಲ್ಲುಗಳನ್ನು ಅಳವಡಿಸುವ ಉದ್ದೇಶದಿಂದ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಜಂಟಿ ಸರ್ವೆ ಕೈಗೊಳ್ಳುವಂತೆ ಆಯುಕ್ತರು ನಿರ್ದೇಶನ ನೀಡಿದರು. ಸರ್ವೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಮುಂದುವರಿಸುವಂತೆ ಸೂಚಿಸಿದರು.
ಸಮಗ್ರ ಯೋಜನೆ ರೂಪಿಸುವ ನಿರ್ದೇಶನ
ಬಫರ್ ರಸ್ತೆಯನ್ನು ಹೊರ ವರ್ತುಲ ರಸ್ತೆಯೊಂದಿಗೆ ಸಂಪರ್ಕಿಸುವುದು, ಅಗತ್ಯ ಕಡೆ ರೈಲ್ವೆ ಮೇಲ್ಸೇತುವೆ ಮತ್ತು ಎಲಿವೇಟೆಡ್ ಬ್ರಿಡ್ಜ್ ನಿರ್ಮಾಣ, ರಾಜಕಾಲುವೆಗಳ ಮೂಲ ಅಗಲ ಸಂರಕ್ಷಣೆ, ರಿಟೈನಿಂಗ್ ವಾಲ್ ನಿರ್ಮಾಣ, ನಗರ ಪ್ರವಾಹ ನಿಯಂತ್ರಣ ಸೇರಿದಂತೆ ಎಲ್ಲ ತಾಂತ್ರಿಕ ಅಂಶಗಳನ್ನು ಸಮಗ್ರವಾಗಿ ಪರಿಗಣಿಸಿ ಯೋಜನೆಯನ್ನು ರೂಪಿಸುವಂತೆ ಆದೇಶಿಸಿದರು.
ಬೆಂಗಳೂರು ಜಲ ಮಂಡಳಿ, ಗೇಲ್ ಇಂಡಿಯಾ, ಕಂದಾಯ, ಭೂಮಾಪನ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಯಾವುದೇ ಅಡೆತಡೆಗಳಿಲ್ಲದೆ ಯೋಜನೆಯನ್ನು ನಿಗದಿತ ಸಮಯಕ್ಕೆ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸ್ಥಳ ಪರಿಶೀಲನೆ ವೇಳೆ ಅಪರ ಆಯುಕ್ತರು (ಅಭಿವೃದ್ಧಿ) ಲೊಖಂಡೆ ಸ್ನೇಹಲ್ ಸುಧಾಕರ್, ಡಾ. ಬಿ.ಎಸ್. ಪ್ರಹ್ಲಾದ್, ತಾಂತ್ರಿಕ ನಿರ್ದೇಶಕರು (ಬಿ-ಸ್ಮೈಲ್), ಭೂಪ್ರದ, ಕಾರ್ಯಪಾಲಕ ಅಭಿಯಂತರರು (ಎಸ್‌ಡಬ್ಲ್ಯೂಡಿ), ಅಮೃತಾ ಸಾಯಿ, ದೇವರಾಜ, ನಾಗಾಂಜನೇಯ, ಸಂದೇಶ್ ಶೆಟ್ಟಿ ಮತ್ತು ಚಂದ್ರಶೇಖರ್ ನಾಯಕ್ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.










