ಬೆಂಗಳೂರು: ಪ್ರಖ್ಯಾತ ಹಿನ್ನಲೆ ಗಾಯಕಿ, ‘ಗಾನಕೋಗಿಲೆ’ ಎಂದು ಪ್ರೀತಿಯಿಂದ ಕರೆಯಲ್ಪಡುವ ಶ್ರೀಮತಿ ಎಸ್. ಜಾನಕಿ ಅವರು ವಿಧಿವಶರಾಗಿದ್ದಾರೆ ಎಂಬ ಸುದ್ದಿ ತಿಳಿದು ಸಂಗೀತ ಲೋಕವೇ ದುಃಖದಲ್ಲಿ ಮುಳುಗಿದೆ.
ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ದಶಕಗಳ ಕಾಲ ಸುಮಧುರ ಹಾಗೂ ಅತ್ಯುತ್ತಮ ಕಂಠದ ಮೂಲಕ ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯವನ್ನು ಆಕರ್ಷಿಸಿದ್ದ ಬಹುಭಾಷಾ ಸಂಗೀತ ತಪಸ್ವಿನಿ ಜಾನಕಿ ಅವರ ನಿಧನದಿಂದ ದೇಶದ ಸಂಗೀತ ಸಾಮ್ರಾಜ್ಯದ ಒಂದು ಮಹೋನ್ನತ ಸುವರ್ಣ ಅಧ್ಯಾಯವೇ ಅಂತ್ಯಗೊಂಡಂತಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರು ತಮ್ಮ ಎಕ್ಸ್ ಖಾತೆಯಲ್ಲಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
“ತಮ್ಮ ಸುಮಧುರ ಹಾಗೂ ಅತಿ ವಿಶಿಷ್ಟವಾದ ಕೋಗಿಲೆ ಕಂಠದ ಮೂಲಕ ದಶಕಗಳ ಕಾಲ ಕೋಟ್ಯಂತರ ಸಂಗೀತ ಪ್ರೇಮಿಗಳ, ಚಲನಚಿತ್ರ ಅಭಿಮಾನಿಗಳ ಹೃದಯವನ್ನು ಆಳಿದ ಪ್ರಖ್ಯಾತ ಹಿನ್ನಲೆ ಗಾಯಕಿ, ಬಹುಭಾಷಾ ಸಂಗೀತ ತಪಸ್ವಿನಿ, ನಮ್ಮ ಹೆಮ್ಮೆಯ ‘ಗಾನಕೋಗಿಲೆ’ ಶ್ರೀಮತಿ ಎಸ್. ಜಾನಕಿ ಅಮ್ಮನವರು ವಿಧಿವಶರಾದ ಸುದ್ದಿ ತಿಳಿದು ತೀವ್ರ ಆಘಾತ ಮತ್ತು ದುಃಖವಾಗಿದೆ. ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದ ಸಂಗೀತ ಲೋಕಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಹಾಗೂ ಅಜರಾಮರ,” ಎಂದು ವಿಜಯೇಂದ್ರ ಯಡಿಯೂರಪ್ಪ ಹೇಳಿದ್ದಾರೆ.
ಅವರ ನಿಧನದಿಂದಾಗಿ ಸಂಗೀತ ಜಗತ್ತಿನಲ್ಲಿ ಅಪಾರ ಶೂನ್ಯತೆ ಉಂಟಾಗಿದೆ ಎಂದು ವ್ಯಕ್ತಪಡಿಸಿದ ವಿಜಯೇಂದ್ರ, “ಆ ದೇವರು ಪೂಜ್ಯ ಜಾನಕಿ ಅಮ್ಮನವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬಸ್ಥರು ಮತ್ತು ನಾಡಿನ ಲಕ್ಷಾಂತರ ಅಭಿಮಾನಿಗಳಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ,” ಎಂದು ಪ್ರಾರ್ಥಿಸಿದ್ದಾರೆ.
ಓಂ ಶಾಂತಿ 🙏











