ದೋಹಾ (ಕತಾರ್): ಕನ್ನಡ ಚಿತ್ರರಂಗದ ‘ಹ್ಯಾಟ್ರಿಕ್ ಹೀರೋ’ ಡಾ. ಶಿವರಾಜ್ ಕುಮಾರ್ ಅವರ 64ನೇ ಜನ್ಮದಿನಾಚರಣೆಯನ್ನು ಕತಾರ್‌ನಲ್ಲಿ ವಿಶೇಷವಾಗಿ ಸ್ಮರಿಸಲಾಯಿತು. ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಶಿವರಾಜ್ ಕುಮಾರ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾ, ಕಳೆದ ಒಂದು ದಶಕದ ಸವಿ ನೆನಪುಗಳನ್ನು ಹಂಚಿಕೊಂಡರು.
ಶ್ರೀ ಶಿವರಾಜ್ ಕುಮಾರ್ ಅವರು ಕತಾರ್‌ಗೆ ಕಳೆದ ಒಂದು ದಶಕದ ಹಿಂದೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಕರ್ನಾಟಕ ಸಂಘ ಕತಾರ್‌ನ ವಾರ್ಷಿಕ ವಿಶೇಷ ಕಾರ್ಯಕ್ರಮ “ಕರ್ನಾಟಕ ರಾಜ್ಯೋತ್ಸವ”ಗೆ ಮೊದಲ ಬಾರಿಗೆ ಪಾದಾರ್ಪಣೆ ಮಾಡಿ ಕತಾರ್‌ನ ಕನ್ನಡ ಅಭಿಮಾನಿಗಳಿಗೆ ಅಪಾರ ಹರುಷ ನೀಡಿದ್ದರು. ನಂತರ ‘ಲೀಡರ್’ ಚಿತ್ರದ ಚಿತ್ರೀಕರಣಕ್ಕಾಗಿ ದೋಹಾಗೆ ಆಗಮಿಸಿದ ಅವರು ಅಲ್ಲಿ ಮತ್ತೊಮ್ಮೆ ಕನ್ನಡದ ಹಿರಿಮೆಯನ್ನು ಮೆರೆದಿದ್ದರು.

ಶಿವರಾಜ್ ಕುಮಾರ್ ಅವರು ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ಜನ್ಮದಿನದಂದು ಅವರ ನಿವಾಸಕ್ಕೆ ಭೇಟಿ ನೀಡಿ, ತಮ್ಮ ಉಪಸ್ಥಿತಿಯನ್ನೇ ವಿಶೇಷ ಉಡುಗೊರೆಯಾಗಿ ನೀಡಿದ್ದರು. ಈ ಮೂಲಕ ತಮ್ಮ ಪ್ರೀತಿ, ವಿಶ್ವಾಸ ಮತ್ತು ಸರಳ ಸ್ವಭಾವವನ್ನು ಪ್ರತಿಬಿಂಬಿಸಿದ್ದರು ಎಂದು ಸುಬ್ರಹ್ಮಣ್ಯ ಹೆಬ್ಬಾಗಿಲು ನೆನಪಿಸಿದರು.

ಇತ್ತೀಚಿನ ವರ್ಷಗಳಲ್ಲಿ ಶಿವಣ್ಣನವರು ಜನ್ಮದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸದಿದ್ದಕ್ಕೆ ಕಾರಣಗಳನ್ನು ಸುಬ್ರಹ್ಮಣ್ಯ ಹೆಬ್ಬಾಗಿಲು ಹಂಚಿಕೊಂಡರು. ಮಾತೃವಿಯೋಗ, ಪ್ರೀತಿಯ ತಮ್ಮ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಹಾಗೂ ಸ್ವತಃ ಶಿವರಾಜ್ ಅವರ ಅನಾರೋಗ್ಯದ ಕಾರಣಗಳಿಂದ ಜನ್ಮದಿನಗಳು ಸಂತಸದಿಂದ ಕೂಡಿರಲಿಲ್ಲ. ಆದರೆ ಈ ಸಂವತ್ಸರ ಆರೋಗ್ಯದಲ್ಲಿ ಚೇತರಿಕೆ ಕಂಡು, ಎಂದಿನಂತೆ ಕನ್ನಡಿಗರಿಗೆ ಆನಂದ ಮಳೆಗರೆಯುತ್ತಾ ಜನ್ಮದಿನವನ್ನು ಆಚರಿಸುತ್ತಿರುವುದು ಎಲ್ಲರಿಗೂ ಸಂತೋಷದ ವಿಷಯವಾಗಿದೆ.

ಸಮಸ್ತ ಪ್ರಪಂಚದ ಕನ್ನಡಿಗರು ಶಿವರಾಜ್ ಕುಮಾರ್ ಅವರ ದೀರ್ಘಾಯುಷ್ಯ, ಆರೋಗ್ಯ ಮತ್ತು ಸುಖ-ಸಮೃದ್ಧಿಗಾಗಿ ಹಾರೈಸುತ್ತಿದ್ದಾರೆ. ಭಗವಂತನ ಮತ್ತು ಗುರುಹಿರಿಯರ ಆಶೀರ್ವಾದ ಶಿವಣ್ಣನವರ ಮೇಲೆ ಹೂಮಳೆಗರೆಯಲಿ ಎಂದು ಸುಬ್ರಹ್ಮಣ್ಯ ಹೆಬ್ಬಾಗಿಲು ಹೃದಯಪೂರ್ವಕ ಹಾರೈಸಿದರು.











