ಜುಲೈ 15ರ ಕಾವೇರಿ ಮಂಡಳಿ ಸಭೆಯ ಬಳಿಕ ನೀರು ಹರಿಸುವ ಬಗ್ಗೆ ತೀರ್ಮಾನ
ಬೆಂಗಳೂರು: ಕಾವೇರಿ ವಿಚಾರದಲ್ಲಿ ರೈತರನ್ನು ಬದುಕಿಸುವುದು, ಕುಡಿಯುವ ನೀರಿನ ಪೂರೈಕೆ ಮತ್ತು ತಮಿಳುನಾಡು ಪಾಲಿನ ನೀರು ಹರಿಸುವ ಕೋರ್ಟ್ ಆದೇಶ ಪಾಲನೆ ಮಾಡುವುದು ತನ್ನ ಸರ್ಕಾರದ ಮುಂದಿನ ಆದ್ಯತೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ಜುಲೈ 15ರಂದು ಕಾವೇರಿ ಮಂಡಳಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ನಮ್ಮ ರಾಜ್ಯದ ವಾದವನ್ನು ಮಂಡಿಸುತ್ತೇವೆ. ಸಭೆಯ ನಂತರ ತೀರ್ಮಾನವನ್ನು ತಿಳಿಸುತ್ತೇವೆ” ಎಂದರು.
ಮಂಡ್ಯ ಶಾಸಕರು ಕಾವೇರಿ ನೀರು ಬಿಡುವಂತೆ ಮನವಿ ಮಾಡಿರುವ ಬಗ್ಗೆ ಪ್ರಶ್ನಿಸಿದಾಗ, “ಮಂಡ್ಯ, ಶ್ರೀರಂಗಪಟ್ಟಣ ಮತ್ತು ಜಿಲ್ಲಾ ಸಚಿವರು ಭೇಟಿ ಮಾಡಿದ್ದರು. ಸಭೆಯ ಬಳಿಕ ತೀರ್ಮಾನ ತಿಳಿಸುತ್ತೇವೆ” ಎಂದು ಶಿವಕುಮಾರ್ ಹೇಳಿದರು.
ಕೆಪಿಎಸ್‌ಸಿ ಅಧ್ಯಕ್ಷರ ಅಮಾನತು ಬಗ್ಗೆ
ರಾಜ್ಯಪಾಲರು ಕೆಪಿಎಸ್‌ಸಿ ಅಧ್ಯಕ್ಷರನ್ನು ಅಮಾನತ್ತುಗೊಳಿಸಿರುವ ಬಗ್ಗೆ ಕೇಳಿದಾಗ, “ರಾಜ್ಯಪಾಲರು ಆದೇಶ ಮಾಡಿದ್ದಾರೆ. ಅವರ ನಂತರ ಯಾರು ಹಿರಿಯರು ಇದ್ದಾರೋ ಅವರಿಗೆ ಜವಾಬ್ದಾರಿ ನೀಡುವಂತೆ ನಿರ್ದೇಶನ ನೀಡಿದ್ದೇನೆ” ಎಂದು ಸಿಎಂ ತಿಳಿಸಿದರು.
ತಿರುಪತಿಯಲ್ಲಿ ಮೊದಲ ಆರತಿ ಕರ್ನಾಟಕದವರಿಗೆ
ತಿರುಪತಿ ದೇವಸ್ಥಾನದಲ್ಲಿ ಮೊದಲ ಆರತಿ ಕರ್ನಾಟಕ ರಾಜ್ಯದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ನೀಡುವ ನಿರ್ಧಾರದ ಬಗ್ಗೆ ಪ್ರಶ್ನಿಸಿದಾಗ ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು:
“ಮಹಾರಾಜರ ಕಾಲದಿಂದಲೂ ಮೊದಲ ಆರತಿ ಕರ್ನಾಟಕದ್ದಾಗಿದೆ. ಇಲ್ಲಿಂದ ದರ್ಶನಕ್ಕೆ ಹೋಗುವ ಜನಪ್ರತಿನಿಧಿಗಳು, ನ್ಯಾಯಾಧೀಶರು, ಅಧಿಕಾರಿಗಳು, ಸಂಸದರು, ಮೇಯರ್, ತಹಶೀಲ್ದಾರ್ ಸೇರಿದಂತೆ ರಾಜ್ಯದವರಿಗೆ ಅವಕಾಶ ನೀಡಲಾಗುವುದು. ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಲ್ಲ. ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳಿಗೂ ಅವಕಾಶ ಸಿಗುತ್ತದೆ. ನಿರ್ದಿಷ್ಟ ಮಾರ್ಗಸೂಚಿಗಳ ಪ್ರಕಾರ ಇದನ್ನು ಜಾರಿಗೊಳಿಸಲಾಗುವುದು.”
ಆಗಸ್ಟ್ 6ರಿಂದ ಮುಂಗಾರು ಅಧಿವೇಶನ
“ಆಗಸ್ಟ್ 6ರಿಂದ ಮುಂಗಾರು ಅಧಿವೇಶನ ಕರೆಯಲು ತೀರ್ಮಾನಿಸಲಾಗಿದೆ. ನಾನು ಒಂದು ದಿನ ಕೆಲಸದ ಮೇಲೆ ದೆಹಲಿಗೆ ಹೋಗಿ ಬರುತ್ತೇನೆ. ನಂತರ ನಮ್ಮ ನಾಯಕರು ದಿನಾಂಕ ನಿಗದಿಪಡಿಸುತ್ತಾರೆ” ಎಂದು ಸಿಎಂ ಮಾಹಿತಿ ನೀಡಿದರು.
ಹೆಚ್. ಹನುಮಂತಪ್ಪ ಅವರ ನಿಧನಕ್ಕೆ ಸಂತಾಪ
ಮಾಜಿ ಸಂಸದ ಹೆಚ್. ಹನುಮಂತಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ, “ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದ್ದಿ. ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿದ್ದರು. ರೈಲ್ವೇ ಆಯೋಗದ ಅಧ್ಯಕ್ಷರಾಗಿದ್ದರು. 45 ವರ್ಷಗಳಿಂದ ಆತ್ಮೀಯರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಹೇಳಿದರು.











