ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ರೈತರ ಒಪ್ಪಿಗೆಯಿಲ್ಲದೆ ಮತ್ತು ಯಾವುದೇ ಮುಂಚಿತ ಮಾಹಿತಿ ನೀಡದೆ ಜೆಎಂಸಿ ಸರ್ವೇ ನಡೆಸಲು ಸರ್ಕಾರ ಹೊರಟಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ ಯುವ ನಾಯಕ ನಿಖಿಲ್ ಕುಮಾರ್.
ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿರುವ ನಿಖಿಲ್ ಕುಮಾರ್, “ಸರ್ಕಾರವು ರೈತರ ಭಾವನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಏನಾದರೂ ಮಾಡಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಹೊರಟಿರುವುದು ದುರ್ದೈವದ ಸಂಗತಿ” ಎಂದು ಹೇಳಿದ್ದಾರೆ.
ರೈತರ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಳ್ಳದೆ ಸರ್ಕಾರವು ಯೋಜನೆಯನ್ನು ಮುಂದುವರಿಸುತ್ತಿರುವುದನ್ನು ತೀವ್ರವಾಗಿ ವಿರೋಧಿಸಿದ ಅವರು, “ಈ ಕೂಡಲೇ ಸರ್ಕಾರ ವಶಕ್ಕೆ ಪಡೆದಿರುವ ರೈತರನ್ನು ಬಿಡುಗಡೆ ಮಾಡಬೇಕು ಹಾಗೂ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು” ಎಂದು ಆಗ್ರಹಿಸಿದ್ದಾರೆ.
ಬಿಡದಿ ಪ್ರದೇಶದ ರೈತರಿಗೆ ಈ ಯೋಜನೆಯಿಂದ ಭೂಮಿ ನಷ್ಟವಾಗುವ ಸಾಧ್ಯತೆಯಿದ್ದು, ಇದಕ್ಕೆ ವಿರುದ್ಧವಾಗಿ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ರೈತರೊಂದಿಗೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ಮುಂದುವರೆಯುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.











