ದೋಹಾ: ಕತಾರ್‌ನಲ್ಲಿ ವಾಸಿಸುತ್ತಿರುವ ಕನ್ನಡಿಗರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಆಕಾಂಕ್ಷೆಗಳಿಗೆ ಮಹತ್ವದ ಉತ್ತೇಜನ ಸಿಕ್ಕಿದೆ. ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿಗಳಾದ (ಶಿಕ್ಷಣ ಮತ್ತು ಸಾಂಸ್ಕೃತಿಕ) ಮಾನ್ಯ ಶ್ರೀ ಹರೀಶ್ ಪಾಂಡೆ ಅವರು, ಕತಾರ್‌ನ ಸ್ಥಳೀಯ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಪಠ್ಯಕ್ರಮದ ಭಾಗವಾಗಿ ಅನುಷ್ಠಾನಗೊಳಿಸಲು ರಾಯಭಾರ ಕಚೇರಿಯಿಂದ ಸಂಪೂರ್ಣ ಆಡಳಿತಾತ್ಮಕ ಮತ್ತು ಸಾಂಸ್ಥಿಕ ಬೆಂಬಲ ನೀಡುವುದಾಗಿ ಅಧಿಕೃತವಾಗಿ ಭರವಸೆ ನೀಡಿದ್ದಾರೆ.
ಕರ್ನಾಟಕ ಸಂಘ ಕತಾರ್ (ಕೆಎಸ್‌ಕ್ಯೂ) ನೂತನ ವ್ಯವಸ್ಥಾಪನಾ ಸಮಿತಿಯು ಇತ್ತೀಚೆಗೆ ಮಾನ್ಯ ಶ್ರೀ ಹರೀಶ್ ಪಾಂಡೆ ಅವರನ್ನು ಭೇಟಿ ಮಾಡಿತು. ಸಂಘದ ಅಧ್ಯಕ್ಷರಾದ ಮಾನ್ಯ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರ ನೇತೃತ್ವದಲ್ಲಿ ನಡೆದ ಈ ಭೇಟಿಯಲ್ಲಿ 2026-28ನೇ ಸಾಲಿನ ನೂತನ ಸಮಿತಿಯ ಪದಾಧಿಕಾರಿಗಳ ಪರಿಚಯ, ಮುಂದಿನ ಎರಡು ವರ್ಷಗಳ ಶೈಕ್ಷಣಿಕ ಯೋಜನೆಗಳು, ವಿದ್ಯಾರ್ಥಿ ಒಕ್ಕೂಟ ಹಾಗೂ ಕನ್ನಡ ಭಾಷಾ ತರಗತಿಗಳ ಕುರಿತು ವಿವರವಾದ ಚರ್ಚೆ ನಡೆಯಿತು.
ಈ ಸಭೆಯಲ್ಲಿ ಮಾನ್ಯ ಶ್ರೀ ಹರೀಶ್ ಪಾಂಡೆ ಅವರು, ಮುಂದಿನ ಪೀಳಿಗೆಯ ಕನ್ನಡಿಗ ಮಕ್ಕಳಲ್ಲಿ ಸಾಂಸ್ಕೃತಿಕ ಬೇರುಗಳನ್ನು ಉಳಿಸುವ ಅಗತ್ಯವನ್ನು ಒತ್ತಿ ಹೇಳಿದರು. ಅವರು ಕತಾರ್‌ನ ಸ್ಥಳೀಯ ಶಾಲೆಗಳಲ್ಲಿ ಕನ್ನಡವನ್ನು ಪಠ್ಯಕ್ರಮದಲ್ಲಿ ಸೇರಿಸುವ ಯೋಜನೆಗೆ ರಾಯಭಾರ ಕಚೇರಿಯಿಂದ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುವುದಾಗಿ ಪ್ರಕಟಿಸಿದರು. ಇದರಿಂದಾಗಿ ಅನಿವಾಸಿ ಕನ್ನಡಿಗ ವಿದ್ಯಾರ್ಥಿಗಳಿಗೆ ಶಾಲೆಗಳ ಮುಖ್ಯವಾಹಿನಿಯಲ್ಲೇ ಕನ್ನಡ ಕಲಿಯುವ ವ್ಯವಸ್ಥಿತ ಅವಕಾಶ ದೊರೆಯಲಿದೆ.

ಇದಲ್ಲದೆ, ಕರ್ನಾಟಕ ಸಂಘ ಕತಾರ್ ಹಮ್ಮಿಕೊಳ್ಳುವ ಎಲ್ಲಾ ಶೈಕ್ಷಣಿಕ, ಸಾಮಾಜಿಕ ಮತ್ತು ಸಮುದಾಯ ಸಮಾಜಮುಖಿ ಕಾರ್ಯಕ್ರಮಗಳಿಗೆ ರಾಯಭಾರ ಕಚೇರಿಯು ಸದಾ ಬೆಂಬಲವಾಗಿ ನಿಲ್ಲುವುದಾಗಿ ಮಾನ್ಯ ಹರೀಶ್ ಪಾಂಡೆ ಅವರು ಭರವಸೆ ನೀಡಿದರು. ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಇಂತಹ ತಳಮಟ್ಟದ ಪ್ರಯತ್ನಗಳಿಗೆ ರಾಯಭಾರ ಕಚೇರಿಯು ಪ್ರೋತ್ಸಾಹ ನೀಡುತ್ತದೆ ಎಂದೂ ಅವರು ಹೇಳಿದರು.

ಈ ಸಕಾರಾತ್ಮಕ ನಿರ್ಧಾರಕ್ಕೆ ಕರ್ನಾಟಕ ಸಂಘದ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಸಭೆಯ ಅಂತ್ಯದಲ್ಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮಾನ್ಯ ಶ್ರೀ ಹರೀಶ್ ಪಾಂಡೆ ಅವರಿಗೆ ಸಾಂಪ್ರದಾಯಿಕ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಈ ಐತಿಹಾಸಿಕ ಭರವಸೆಯು ಕತಾರ್‌ನ ಕನ್ನಡಿಗ ಸಮುದಾಯಕ್ಕೆ ಹೊಸ ಆಶಾಕಿರಣವಾಗಿ ಕಂಡುಬಂದಿದೆ.











